ಮಡಿಕೇರಿ, ಮೇ ೩೧ : ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ತಂಬಾಕು ಮುಕ್ತ ವಾತಾವರಣವನ್ನಾಗಿಸಲು ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ "ನಮಗೆ ಆಹಾರ ಬೇಕು, ತಂಬಾಕು ಅಲ್ಲ" ಎಂಬ ಧ್ಯೇಯ ವಾಕ್ಯದೊಂದಿಗೆ ಬುಧವಾರ ನಗರದ ಸರ್ಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ನಡೆಯಿತು.

ಆರೋಗ್ಯ, ಶಿಕ್ಷಣ, ಸಂಸ್ಕೃತಿ ಈ ಎಲ್ಲವೂ ಪ್ರಾರಂಭವಾಗುವುದು ಶಾಲಾ ದಿನಗಳಲ್ಲಿ. ವಿದ್ಯಾರ್ಥಿಗಳ ಜೀವನ ಪ್ರಾರಂಭವಾಗುವುದೇ ಶಾಲಾ ದಿನಗಳಲ್ಲಿ, ಆದ್ದರಿಂದ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಂಡು ಕುಟುಂಬವನ್ನು ರಕ್ಷಿಸುವುದರ ಜೊತೆಗೆ ಸಮಾಜವನ್ನು ರಕ್ಷಿಸಬೇಕು ಎಂದು ಪ್ರಸಾದ್ ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ ೮ ರಿಂದ ೯ ನೇ ತರಗತಿಯ ವಯಸ್ಸಿನ ಮಕ್ಕಳು ಅತಿ ಹೆಚ್ಚು ತಂಬಾಕು ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ತಂಬಾಕು ಸೇವನೆ ಮಾಡಿದರೆ ಏನಾಗುತ್ತದೆ ಎಂಬ ಕುತೂಹಲ ಅವರಲ್ಲಿರುತ್ತದೆ. ಈ ಕುತೂಹಲ ಶಿಕ್ಷಣ, ಸಂಸ್ಕೃತಿಯಲ್ಲಿರಬೇಕೇ ಹೊರತು ದುಶ್ಚಟಗಳಿಗಲ್ಲ ಎಂದು ಹೇಳಿದರು.

ಪ್ರತಿ ವರ್ಷ ತಂಬಾಕು ಹೊಗೆ ಸೇವನೆಯಿಂದ ಸುಮಾರು ೧೨ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ನಿರ್ಲಕ್ಷö್ಯ ಮಾಡದೆ, ಪ್ರತಿಯೊಬ್ಬರಲ್ಲೂ ತಂಬಾಕು ಸೇವನೆ ಮತ್ತು ಧೂಮಪಾನ ಮಾಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಅವರು ಹೇಳಿದರು.

ನೋಡಲ್ ಅಧಿಕಾರಿ ಡಾ. ರೇವಣ್ಣ ಅವರು ಮಾತನಾಡಿ, ಹದಿ ಹರೆಯದ ವಯಸ್ಸಿನ ಯುವಕರು ತಂಬಾಕು ಸೇವನೆ, ಧೂಮಪಾನ ಮತ್ತಿತರ ದುಶ್ಚಟಗಳಿಗೆ ಒಳಗಾಗಬಾರದು ಎಂದು ಹೇಳಿದರು.

ಇದೇ ಸಂದರ್ಭ ಸರ್ಕಾರಿ ಪ್ರೌಢÀಶಾಲೆಗೆ ಹೊಸದಾಗಿ ೧೫ ವಿದ್ಯಾರ್ಥಿಗಳನ್ನು ಹೂ ಗುಚ್ಛ ನೀಡಿ ಶಿಕ್ಷಕರು ಬರಮಾಡಿಕೊಂಡರು. ಅವರಿಗೆ ಪುಸ್ತಕ ಹಾಗೂ ಸಮವಸ್ತç ವಿತರಿಸಲಾಯಿತು.

ಆರ್‌ಸಿಎಚ್ ಅಧಿಕಾರಿ ಡಾ.ಗೋಫಿನಾಥ್, ನೌಕರರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್, ತಂಬಾಕು ನಿಯಂತ್ರಣಾಧಿಕಾರಿ ಶ್ರೀನಿವಾಸ್ ಬಿ.ಎಲ್., ಉಪ ಪ್ರಾಂಶುಪಾಲರು ಇತರರು ಇದ್ದರು. ಮೋಕ್ಷ, ಪ್ರತೀಕ, ಶೃತಿಲಾ ಪ್ರಾರ್ಥಿಸಿದರು.