ವೀರಾಜಪೇಟೆ, ಮೇ ೩೧: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ನಾಮೆರ ಕುಟುಂಬದ ವತಿಯಿಂದ ಇತ್ತೀಚೆಗೆ ಗೋಣಿಕೊಪ್ಪದ ಪ್ಲಾಂರ‍್ಸ್ ಕ್ಲಬ್‌ನಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಐಮುಡಿಯಂಡ ರಾಣಿ ಮಾಚಯ್ಯ ಅವರು, ನನ್ನ ಜೀವನದ ಕೊನೆಯ ಉಸಿರಿರುವ ತನಕ ಜಾನಪದ ಕಲಾ ಪ್ರಾಕಾರವಾದ ಉಮ್ಮತಾಟ್ ವಿಶ್ವದೆಲ್ಲೆಡೆ ಪಸರಿಸುವ ಕೆಲಸ ನಿರಂತರವಾಗಿ ಮಾಡಲಿದ್ದೇನೆ ಎಂದು ನುಡಿದರು. ಉಮ್ಮತ್ತಾಟ್ ಕಲಾ ತಂಡವನ್ನು ಕಟ್ಟಿಕೊಂಡು ಮಕ್ಕಳಿಗೆ ಕಲೆಯನ್ನು ಕಲಿಸಿ ದೇಶದೆಲ್ಲೆಡೆ ಕರೆದುಕೊಂಡು ಹೋಗಿ ಅನೇಕ ಬಾರಿ ನೃತ್ಯ ಪ್ರಾಕಾರಗಳನ್ನು ಪ್ರಸ್ತುತಪಡಿಸಿದ್ದೇನೆ. ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿದ್ದ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವೀರಾಜಪೇಟೆ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯರಾದ ನಾಮೆರ ಜಾನಕಿ ಕುಟ್ಟಪ್ಪ ಅವರು ಸಾಧನೆಯ ಹಾದಿಯತ್ತ ಮುನ್ನುಗ್ಗುತ್ತಿರುವ ಭಾರತ ದೇಶದ ಹೆಮ್ಮೆಯ ನಾಗರಿಕ ಪ್ರಶಸ್ತಿಯನ್ನು ಗಿಟ್ಟಿಸಿರುವ ರಾಣಿ ಮಾಚಯ್ಯ ತನ್ನ ಜೀವನದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.

ವೀರಾಜಪೇಟೆ ಜೂನಿಯರ್ ಕಾಲೇಜು ಪ್ರಾಂಶುಪಾಲೆ ತಾತಂಡ ಜ್ಯೋತಿ ರಾಣಿ ಮಾಚಯ್ಯ ಅವರನ್ನು ಪರಿಚಯಿಸಿದರು. ನಾಮೆರ ಝಾನ್ಸಿ ಕುಟ್ಟಪ್ಪ ಮತ್ತು ಮಿನು ಮುತ್ತಮ್ಮ ಪ್ರಾರ್ಥಿಸಿದರೆ, ನಾಮೆರ ರವಿ ದೇವಯ್ಯ ಸ್ವಾಗತಿಸಿದರು. ನಾಮೆರ ಸರಿತ ದೇವಯ್ಯ ವಂದಿಸಿದರು.