ಸೋಮವಾರಪೇಟೆ, ಮೇ ೨೯: ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ್ದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಿಶ್ಚಿತ; ಮಡಿಕೇರಿ ಕ್ಷೇತ್ರದಲ್ಲಿ ಪ್ರಥಮ ಆದ್ಯತೆಯೊಂದಿಗೆ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅಭಯ ನೀಡಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಜೇಸೀ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರದ ಪ್ರತಿ ಮನೆಗೂ ತಲುಪಿಸುವುದು ತÀನ್ನ ಜವಾಬ್ದಾರಿ ಎಂದರು.

ಮುAದಿನ ೫ ವರ್ಷಗಳ ಕಾಲ ಬಡವರ ಕೆಲಸ ಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುತ್ತೇನೆ. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತೇನೆ. ಟೀಕೆಗಳನ್ನು ಮಾಡುವ ಬದಲು ಅಭಿವೃದ್ದಿ ಕಾರ್ಯಗಳತ್ತ ಗಮನ ಹರಿಸಬೇಕಿದೆ. ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಮುಂದಿನ ದಿನಗಳಲ್ಲಿ ಜನಮೆಚ್ಚುವ ರೀತಿಯಲ್ಲಿ ಕೆಲಸ ಮಾಡಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಪಕ್ಷದ ಹಿರಿಯರ ಮಾರ್ಗದರ್ಶನ ದೊಂದಿಗೆ ಕೆಲಸ ಮಾಡಲಾಗುವುದು. ೫ ಬಾರಿ ಶಾಸಕರಾಗಿದ್ದವರೂ ಸಹ ಸಲಹೆ ನೀಡಿದರೆ ಸ್ವೀಕರಿಸುತ್ತೇನೆ ಎಂದ ಡಾ. ಮಂಥರ್ ಗೌಡ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಹಕಾರ ಸಂಘಗಳು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾಗುವುದು. ಆ ಮೂಲಕ ಕಾರ್ಯಕರ್ತರಿಗೂ ಅಧಿಕಾರ ನೀಡ ಲಾಗುವುದು ಎಂದು ಭರವಸೆಯಿತ್ತರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ಗೆಲುವು ಸಾಧ್ಯವಾಗಿರಲಿಲ್ಲ. ಈ ಬಾರಿ ಗೆದ್ದಿದ್ದೇವೆ. ಜಿಲ್ಲೆಯ ಅಭಿವೃದ್ಧಿ ಮುಖ್ಯ. ಯುವ ಶಾಸಕರ ನೇತೃತ್ವದಲ್ಲಿ ಹೆಚ್ಚಿನ ಕೆಲಸ ಮಾಡಬೇಕಿದೆ. ಸೋಮವಾರಪೇಟೆ ಪಟ್ಟಣದಲ್ಲಿ ಶೀಘ್ರದಲ್ಲಿಯೇ ಶಾಸಕರ ಕಚೇರಿ ಕಾರ್ಯಾರಂಭ ಮಾಡಲಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯವರೂ ಹೆಚ್ಚಿನ ಬೆಂಬಲ ನೀಡಿದ್ದಾರೆ. ಅನ್ಯ ಪಕ್ಷದಿಂದ ಬಂದವರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವದಿಂದ ಕಾಣುತ್ತೇವೆ ಎಂದರು.

ಕೆಪಿಸಿಸಿ ಮುಖಂಡ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡುವುದಾಗಿ ಬಿಜೆಪಿಯವರು ಹೇಳಿಕೊಳ್ಳುತ್ತಿದ್ದರು. ಇದೀಗ ಕೊಡಗು ಬಿಜೆಪಿ ಮುಕ್ತವಾಗಿದೆ. ತಾಲೂಕು ಕಚೇರಿಯ ಅವ್ಯವಸ್ಥೆಗಳು, ಪೊಲೀಸ್ ಠಾಣೆಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಹಿಂದಿನ ಸರ್ಕಾರದಲ್ಲಿ ಆಗಿರುವ ತಪ್ಪುಗಳನ್ನು ಮಾಡಬಾರದು ಎಂದ ಅವರು, ಕ್ಷೇತ್ರದ ಕೆಲಸಗಳ ಬಗ್ಗೆ ಶಾಸಕರು ಗಮನ ಹರಿಸಲಿದ್ದಾರೆ. ಬೆಂಗಳೂರಿನಲ್ಲಿ

(ಮೊದಲ ಪುಟದಿಂದ) ಆಗಬೇಕಿರುವ ಕೆಲಸಗಳ ಬಗ್ಗೆ ತಾನು ಗಮನ ಹರಿಸುತ್ತೇನೆ ಎಂದು ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಬಿಜೆಪಿಯ ಕೋಟೆಗೆ ಕಾಂಗ್ರೆಸ್ ಲಗ್ಗೆಯಿಟ್ಟಿದೆ. ಮುಂದೆ ಕೊಡಗು ಸಂಪೂರ್ಣ ಕಾಂಗ್ರೆಸ್‌ಮಯವಾಗಲಿದೆ. ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಸೋಮವಾರಪೇಟೆ ಭಾಗದಲ್ಲಿ ಪುರಸಭೆ, ಪ್ರವಾಸೋದ್ಯಮ, ಕೈಗಾರಿಕಾ ಘಟಕಗಳ ಸ್ಥಾಪನೆ, ವಿದ್ಯಾಸಂಸ್ಥೆಗಳ ಸ್ಥಾಪನೆಯೊಂದಿಗೆ ಪಟ್ಟಣಕ್ಕೆ ಕಾಯಕಲ್ಪ ನೀಡಬೇಕಿದೆ. ಈ ಬಗ್ಗೆ ಶಾಸಕರು ಗಮನ ಹರಿಸಲಿದ್ದಾರೆ ಎಂದರು.

ಕೆಪಿಸಿಸಿ ಮುಖಂಡರಾದ ಕೆ.ಪಿ. ಚಂದ್ರಕಲಾ ಮಾತನಾಡಿ, ವಿರೋಧ ಪಕ್ಷದವರನ್ನು ದೂರುವ ಬದಲು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡೋಣ. ಈ ಚುನಾವಣೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಪಕ್ಷದ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್, ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಪ್ರಮುಖರಾದ ಎಸ್.ಎಂ. ಚಂಗಪ್ಪ, ಹೆಚ್.ಆರ್. ಸುರೇಶ್, ಔರಂಗಜೇಬ್, ಶಾಂತವೇರಿ ವಸಂತ್, ಈಶ್ವರಚಂದ್ರ ಸಾಗರ್, ತೆನ್ನೀರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಎಸ್‌ಸಿ ಘಟಕದ ಅಧ್ಯಕ್ಷ ಬಿ.ಇ. ಜಯೇಂದ್ರ, ಹೆಚ್.ಎ. ನಾಗರಾಜು, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುನಿಲ್, ಅಬ್ದುಲ್ ರಜಾಕ್ ಬಜೆಗುಂಡಿ, ಬಿ.ಜಿ. ಇಂದ್ರೇಶ್ ಸೇರಿದಂತೆ ಇತರರು ಇದ್ದರು.