ಸೋಮವಾರಪೇಟೆ, ಮೇ ೨೯: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆ ವ್ಯಾಪ್ತಿಯಲ್ಲಿ ಆಟೋವೊಂದರಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೂಲತಃ ಕಲ್ಕತ್ತಾದವರಾದ, ಪ್ರಸ್ತುತ ಕಿರಗಂದೂರು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಮೊಹರುದ್ದೀನ್, ಖಬೀರುಲ್ಲಾ, ಸಾಜುಲ್, ತುಫಾನ್ ಹಾಗೂ ಆಲೇಕಟ್ಟೆ ರಸ್ತೆ ನಿವಾಸಿ ಅಬ್ದುಲ್ ಮಜೀದ್ ಅವರುಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ ಆಟೋ ಸೇರಿದಂತೆ ಸುಮಾರು ೩೦ ಕೆ.ಜಿ.ಯಷ್ಟು ಗೋಮಾಂಸವನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್, ಸಿಬ್ಬಂದಿಗಳಾದ ಪ್ರವೀಣ್, ಭರತ್, ಮಲ್ಲೇಶ್ ಅವರುಗಳು ಭಾಗಿಯಾಗಿದ್ದರು.