ನೀವು ಸಂವಿಧಾನಬದ್ಧವಾಗಿ ಜನರಿಂದ ಆರಿಸಿ ಬಂದಿದ್ದೀರಿ. ನಿಮ್ಮ ಮೇಲೆ ಜನರು ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಮತದಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದಾನೆ. ಉಳಿದಿರುವುದು, ಮುಂದಿನ ಐದು ವರ್ಷಗಳ ಕಾಲ ನಿಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವುದು ಅಷ್ಟೇ!

ಮತದಾನ ಮಾಡಿದವರು ತಮ್ಮ ವೈಯಕ್ತಿಕ ಲಾಭವನ್ನು ಎಂದಿಗೂ ಆಶಿಸುವುದಿಲ್ಲ. ಬಯಸುವುದೆಲ್ಲ ಸಾರ್ವತ್ರಿಕ ಅಭಿವೃದ್ಧಿಯನ್ನೇ. ಹಾಗೆಂದು ರಸ್ತೆ, ಚರಂಡಿ, ನೀರು, ವಿದ್ಯುತ್, ಆರೋಗ್ಯ, ಸ್ವಚ್ಛತೆ ಇತ್ಯಾದಿಗಳೇ ಅಭಿವೃದ್ಧಿಯಲ್ಲ. ಮೂಲಭೂತ ಸೌಲಭ್ಯಗಳನ್ನು ಯಾವುದೇ ಸರ್ಕಾರ/ಶಾಸಕರಿದ್ದರೂ ಜನರಿಗೆ ಒದಗಿಸಲೇಬೇಕಲ್ಲವೇ?

ಸರ್ಕಾರಗಳು ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೆ ತರುತ್ತವೆ. ಅವನ್ನೆಲ್ಲ ತಮ್ಮ ಸಾಧನೆ ಎಂದು ಮುಂದಿನ ಚುನಾವಣೆಯಲ್ಲಿ ತೋರಿಸುತ್ತವೆ. ಕಡತಗಳಲ್ಲಿ ಕೋಟ್ಯಂತರ ವೆಚ್ಚದ ಅನುದಾನ ಬಿಡುಗಡೆಯಾಗಿರುತ್ತದೆ. ಆದರೆ, ಎಲ್ಲ ಯೋಜನೆಗಳೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿವೆಯೇ ಎಂಬುದನ್ನು ಯಾರೊಬ್ಬರೂ ತನಿಖೆ ಮಾಡಲಾರರು. ಬಹುತೇಕ ಯೋಜನೆಗಳಲ್ಲಿ ಫಲಾನುಭವಿಗಳ ಪಟ್ಟಿಯೇ ಇರುವುದಿಲ್ಲ. ಆದರೆ, ಹಣ ಮಾತ್ರ ಬಿಡುಗಡೆಯಾಗಿರುತ್ತದೆ. ಹೀಗಾಗಬಾರದು. ವಿಧಾನ ಸೌಧದಿಂದ ಯೋಜನೆ ಹೊರಡುವಾಗಿನಿಂದ, ಅದು ರಾಮನಿಗೋ, ಸೋಮನಿಗೋ ತಲುಪುವವರೆಗೂ ಫಾಲೋಅಪ್ ಆಗಲೇಬೇಕು.

ಕೊಡಗಿನಂಥ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆಗಳು ಬಾಳಿಕೆ ಬರುವುದೇ ಇಲ್ಲ. ಇಲ್ಲಿ ವೈಜ್ಞಾನಿಕವಾದ ರಸ್ತೆ ಆಗುತ್ತಿಲ್ಲ. ಕಾಂಕ್ರೀಟ್ ರಸ್ತೆಗಳಾದರೂ ಒಂದೇ ವರ್ಷಕ್ಕೆ ಕಜ್ಜಿ ಹಿಡಿಯುತ್ತಿವೆ!. ಪೂರ್ವಭಾವಿಯಾಗಿ ಹಳೆಯ ರಸ್ತೆಯ ಪಳೆಯುಳಿಕೆಗಳನ್ನು, ಬದಿಯ ಗಿಡಗಂಟಿಗಳನ್ನು ತೆರವು ಮಾಡಿ, ಯೋಗ್ಯವಾದ ಚರಂಡಿ ಮಾಡಿ, ಅನಂತರ ಜಲ್ಲಿಕಲ್ಲುಗಳನ್ನು ಪೇರಿಸಿ, ನೆಲ ಗಟ್ಟಿಯಾದ ಬಳಿಕವಷ್ಟೇ ಡಾಮರು ಹಾಕಿ ಸಮತಟ್ಟು ಮಾಡಿದರೆ, ಒಂದಿಷ್ಟು ವರ್ಷ ರಸ್ತೆಗಳು ನೆಟ್ಟಗುಳಿಯಲು ಸಾಧ್ಯ! ಇದಕ್ಕಾಗಿ ಕಟ್ಟುನಿಟ್ಟಿನ ಉಸ್ತುವಾರಿ ಬೇಕಾಗಿದೆ. ಕಳಪೆ ಕೆಲಸ ಕಂಡರೆ, ದಂಡಿಸುವ ಮಾರ್ಗೋಪಾಯವೂ ಬೇಕಿದೆ. ಕೇವಲ ಗುತ್ತಿಗೆದಾರ ಮಾತ್ರವಲ್ಲ, ಸಂಬAಧಿಸಿದ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಮತ್ತು ಇಂಜಿನಿಯರ್ ಕೂಡಾ ಇದಕ್ಕೆ ಹೊಣೆಗಾರರಾಗುತ್ತಾರೆ.

ಇನ್ನೆಷ್ಟು ಸುದೀರ್ಘ ವರ್ಷಗಳ ಕಾಲ ಈ ಮುಗ್ದ ಜನರು ಭ್ರಷ್ಟಾಚಾರದ ಕಬಂಧಬಾಹುಗಳಲ್ಲಿ ಬಂದಿಯಾಗಬೇಕು ಹೇಳಿ? `ನನ್ನಿಂದ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯವಾಯ್ತು’ ಎಂದು ನೀವು ಎದೆತಟ್ಟಿ ಹೇಳಿಕೊಳ್ಳುವ ಕಾಲ ಬರಲಿ. ಜವಾನನಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೂ ಕೈಚಾಚುವ ಪ್ರವೃತ್ತಿ ನಡೆದೇ ಬರುತ್ತಿದೆ. ಒಬ್ಬ ಕೂಲಿ ಕಾರ್ಮಿಕ, ತನ್ನ ಅಗತ್ಯಗಳಿಗಾಗಿ ಹೊಟ್ಟೆ ಹಸಿವನ್ನೂ ಬದಿಗಿಟ್ಟು, ಅನ್ನ ನೀಡುವ ಕೆಲಸವನ್ನೂ ಬಿಟ್ಟು ಕಚೇರಿಗೆ ಬಂದರೆ, ಸರ್ಕಾರದಿಂದ ಉಚಿತವಾಗಿರುವ ಸೇವೆಗಳು ಅವನಿಗ್ಯಾಕೆ ಸಿಗುತ್ತಿಲ್ಲ?. ಕರುಳು ಕಿತ್ತು ಬರುವ ಹೊಟ್ಟೆ ಹಸಿವನ್ನೂ ತಾಳಿಕೊಂಡು, ಕಣ್ಣೀರನ್ನೂ ಸಹಿಸಿಕೊಂಡು ಕಚೇರಿಗಳಿಗೆ ಅಲೆಯುವ ಶ್ರೀಸಾಮಾನ್ಯನ ಪರಿಸ್ಥಿತಿ ನಿಮಗೂ ಅರಿವಿದೆ ಅಂದುಕೊಳ್ಳುತ್ತೇವೆ. ದಯವಿಟ್ಟು ಭ್ರಷ್ಟಾಚಾರಕ್ಕೆ ತಿಲಾಂಜಲಿಯಿಡುವ ಸಾಹಸ ನಿಮ್ಮಿಂದಲೇ ಆರಂಭವಾಗಲಿ. ಜೊತೆಗೆ ಮಧ್ಯವರ್ತಿಗಳ ಹಾವಳಿಯೂ ಕೊನೆಗೊಳ್ಳಲಿ!

ದಯವಿಟ್ಟು ಮೊದಲು ಜನರ ಹೊಟ್ಟೆ ತಣ್ಣಗೆ ಮಾಡಿ. ಹಾಗೆ ಮಾಡಲು ನೀವು ಉಚಿತ ಧಾನ್ಯವನ್ನು ನೀಡಬೇಕೆಂದು ಯಾರೂ ಬಯಸುತ್ತಿಲ್ಲ. ಅನ್ನ ಸಂಪಾದಿಸಿಕೊಳ್ಳಲು ಉದ್ಯೋಗಾವಕಾಶ ಕಲ್ಪಿಸಿಕೊಡಿ. ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಕೊಡಿಸಲು ಲೆಕ್ಕವಿಲ್ಲದಷ್ಟು ಬ್ಯಾಂಕ್‌ಗಳಿವೆ. ಸರ್ಕಾರದ ಅಧೀನದಲ್ಲೇ ನಿಗಮಗಳೂ ಇವೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವವರಿಗೆ ಇನ್ನಷ್ಟು ಉತ್ತೇಜನ ಕೊಡಿ. ಶ್ರೀಮಂತಿಕೆ ನೋಡಿ ಸಾಲ ಕೊಡುವ ಬ್ಯಾಂಕ್‌ಗಳ ಕರಾಮತ್ತಿಗೂ ಕಡಿವಾಣ ಹಾಕಿ!

ಕೂಲಿ ಮಾಡಿ ದಿನದೂಡುವವನ ಸಂಬಳ ಏರಿಕೆಯಾಗದಿದ್ದರೂ, ಅಗತ್ಯ ವಸ್ತುಗಳ ಬೆಲೆ ಮಾತ್ರ ಗಗನಮುಖಿಯಾಗುತ್ತಲೇ ಇದೆ. ಎಲ್ಲವನ್ನೂ ಕೊಟ್ಟು `ಹೋಗು ಬದುಕಿಕೋ’ ಎಂದರೆ, ಬೆಲೆಯೇರುತ್ತಿರುವ ಈ ಕಾಲಘಟ್ಟದಲ್ಲಿ ಆತನ ಬದುಕು ಹೇಗೆ? ಸರ್ಕಾರವೇ ಬೆನ್ನಿಗೆ ನಿಲ್ಲಬೇಕು. ಇದಕ್ಕಾಗಿ ನಿಮ್ಮ ಒತ್ತಾಯ, ಒತ್ತಡಗಳಿರಲಿ!

ಇಂದಿಗೂ ನಮ್ಮಲ್ಲಿ ತಲೆಗೊಂದು ಸೂರಿಲ್ಲದ ಅದೆಷ್ಟೋ ಮಂದಿಯಿದ್ದಾರೆ. ತಮ್ಮ ಹೆಸರಿನಲ್ಲಿ ಒಂದಿAಚೂ ಜಾಗವಿಲ್ಲ. ಇರಲು ಸ್ವಂತದ್ದಾದ ಮನೆಯಿಲ್ಲ. ದುಡಿದ ಹಣವನ್ನೆಲ್ಲ ಬಾಡಿಗೆಗೋ, ಭೋಗ್ಯದ ಮನೆಗೋ ನೀಡಬೇಕು. ಸರ್ಕಾರಗಳು ವಸತಿಗಾಗಿ ಎಷ್ಟೇ ಯೋಜನೆ ರೂಪಿಸಿದ್ದರೂ ಅವು ಎಲ್ಲರಿಗೂ ತಲುಪಿಲ್ಲ. ವಸತಿ ಹಂಚಿಕೆಯಲ್ಲೂ ಅಕ್ರಮ ನಡೆಯುತ್ತಿದೆ. ಕಾಫಿ ತೋಟಗಳ ಕಾರ್ಮಿಕರಿಗೆ ನಿವೇಶನ, ಸೂರಿಗಾಗಿ ಹೋರಾಟ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿರಬಹುದು. ಪ್ರತಿಯೊಬ್ಬರಿಗೂ ಪ್ರತ್ಯೇಕ ಮನೆ ಸಿಗದಿದ್ದರೂ, ಆಯಾ ಪಂಚಾಯ್ತಿಗಳಲ್ಲಿ ಅಪಾರ್ಟ್ಮೆಂಟ್ ರೀತಿಯ ವಸತಿ ಸಮುಚ್ಛಯಗಳಾದರೆ, ಸಾಮಾನ್ಯ ಜನರು ಸ್ವಾವಲಂಬಿಗಳಾಗಿ ಬದುಕಿಕೊಳ್ಳಬಹುದೇನೋ!

ಇಂದು ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳಿದ್ದರೂ, ಜನರೇಕೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಿದ್ದಾರೆ ಎಂಬುದು ತಮಗೆ ಗೊತ್ತೇ ಇದೆ. ಇಲ್ಲೂ ಕೊರತೆಗಳದ್ದೇ ಸಾಮ್ರಾಜ್ಯ! ದಯವಿಟ್ಟು ಇಂಥ ಆಸ್ಪತ್ರೆಗಳು ಶ್ರೀಸಾಮಾನ್ಯರಿಗೆ ಉಪಕಾರಿಯಾಗುವಂತೆ, ಜನರ ಸ್ವಾಸ್ಥö್ಯಕ್ಕೆ ಶ್ರೀರಕ್ಷೆಯಾಗುವಂತೆ ಕ್ರಮ ವಹಿಸಿ. ಜೊತೆಗೆ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವಂತೆ ಸೌಲಭ್ಯ ಕಲ್ಪಿಸಿ. ದುಡಿದ ಹಣವನ್ನೆಲ್ಲ ಮಹಾನಗರಗಳ ಆಸ್ಪತ್ರೆಗಳಿಗೆ ಸುರಿಯುವುದು ಇನ್ನಾದರೂ ತಪ್ಪಿಹೋಗಲಿ.

ಪ್ರಕೃತಿಯ ನಾಡಾದರೂ ಕೊಡಗಿನಲ್ಲಿ ಜಲ ಗಂಡಾAತರ ತಪ್ಪುತ್ತಿಲ್ಲ. ಇರುವ ಜಲ ಮೂಲಗಳ ನಿರ್ವಹಣೆಯಾಗುತ್ತಿಲ್ಲ. ಸ್ಥಳೀಯ ಆಡಳಿತ ಸಂಸ್ಥೆಗಳು ಈ ಬಗ್ಗೆ ಇನ್ನಿಲ್ಲದ ತಾತ್ಸಾರ ವಹಿಸುತ್ತಿವೆ. ಇದಕ್ಕೆ ಮಡಿಕೇರಿ ನಗರವೇ ಸಾಕ್ಷಿ. ನಗರದಲ್ಲಿ ಆರೇಳು ಪುರಾತನ ಜಲ ಮೂಲಗಳಿವೆ. ಕಾಲಕಾಲಕ್ಕೆ ಹೂಳೆತ್ತದೆ ಅವು ಸೊರಗುತ್ತಿವೆ. ಇವೇ ಜಲ ಮೂಲಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೆ, ಕೋಟ್ಯಂತರ ರೂಪಾಯಿ ವ್ಯಯಿಸಿ ಕುಂಡಾಮೇಸ್ತಿç ಎಂಬ ನೀರಿನ ಯೋಜನೆ ಬಂತು. ಈಗಲೂ ಬೇಸಿಗೆಯಲ್ಲಿ ಜನರ ದಾಹ ತೀರಿಸಲು ಸಾಧ್ಯವಾಗುತ್ತಿಲ್ಲ!

ಕೊಡಗಿನಲ್ಲಿ ಕೈಗಾರಿಕೆಗಳಿಲ್ಲ, ರೈಲ್ವೇ ವ್ಯವಸ್ಥೆ ಇಲ್ಲ. ಹಾಗೆಂದು ಜನರು ಇವುಗಳ್ನು ಬಯಸುವುದೂ ಇಲ್ಲ. ಗುಡಿ ಕೈಗಾರಿಕೆಗಳಿಗೆ ಅವಕಾಶವಿದೆ. ನಮಗೆ ರೈಲ್ವೇ ಬೇಡ. ಕುಗ್ರಾಮಗಳನ್ನು ಸಂಪರ್ಕಿಸಲು ಸುವ್ಯವಸ್ಥಿತ ಸಾರಿಗೆ ವ್ಯವಸ್ಥೆ ಬೇಕೇಬೇಕು. ದಯಮಾಡಿ ಇದಕ್ಕಾಗಿ ಪ್ರಯತ್ನ ಮಾಡಿ.

ಪ್ರಕೃತಿ ಪ್ರವಾಸೋದ್ಯಮಕ್ಕೆ ಇಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಸಾಕಾರವಾಗಿಲ್ಲ. ಪ್ರವಾಸಿಗರು ಹೊರಗಿನಿಂದ ಕೊಡಗಿನ ಬಗ್ಗೆ ಮಾಹಿತಿಯರಿತು ಬರುತ್ತಾರೆ. ಹಾಗೇ ಸಪ್ಪೆ ಮೋರೆಯೊಂದಿಗೆ ಹಿಂದಿರುಗುತ್ತಾರೆ. ಸಸ್ಯಶ್ಯಾಮಲೆಗೆ ಧಕ್ಕೆಯಾಗದ ರೀತಿ ಇಲ್ಲಿನ ಪ್ರವಾಸೋದ್ಯಮ ಅರಳಿ ನಿಲ್ಲುವ ವ್ಯವಸ್ಥೆ ನಿಮ್ಮಿಂದಾಗಲಿ.

ಕೊಡಗಿನ ಜ್ವಲಂತ ಭೂಹಿಡುವಳಿ ಸಮಸ್ಯೆ, ವನ್ಯಪ್ರಾಣಿ-ಮಾನವ ಸಂಘÀರ್ಷ, ಅರಣ್ಯ ಸಂಬAಧಿತ ಸಮಸ್ಯೆಗಳೂ ನಿಮ್ಮ ಗಮನಕ್ಕಿರಲಿ. ಮುಂದಿನ ಐದು ವರ್ಷಗಳಲ್ಲಿ ಸಮಸ್ಯೆಗಳು ಪೂರ್ಣ ಪರಿಹಾರವಾಗಲಿಕ್ಕಿಲ್ಲ. ನಿಮ್ಮ ಸಣ್ಣ ಪ್ರಾಮಾಣಿಕ ಪ್ರಯತ್ನಗಳು, ಮುಂದೆಯೂ ನಿಮಗೆ ಸೇವೆ ಮಾಡುವ ಶಕ್ತಿ ನೀಡುತ್ತವೆ ಎಂಬುದನ್ನು ಶ್ರೀಸಾಮಾನ್ಯನಾಗಿ ಹೇಳಬಲ್ಲೆ.

- ಆನಂದ್ ಕೊಡಗು, ಮಡಿಕೇರಿ