ಕಣಿವೆ, ಮೇ ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಗಳಲ್ಲಿರುವ ಪೈಸಾರಿ ಜಾಗವನ್ನು ಒತ್ತುವರಿ ಮಾಡಿ ಅತಿಕ್ರಮಿಸುವವರ ವಿರುದ್ಧ ಪಂಚಾಯಿತಿಯಿAದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ಸರ್ಕಾರದ ಭೂಮಿಯನ್ನು ಸಂರಕ್ಷಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕಡು ಬಡವರಿಗೆ ಮತ್ತು ನಿರ್ಗತಿಕರಿಗೆ ನೀಡಬೇಕೆಂದು ಪಂಚಾಯಿತಿ ಹಿರಿಯ ಸದಸ್ಯೆ ಫಿಲೋಮಿನಾ ಜಾರ್ಜ್ ಒತ್ತಾಯಿಸಿದರು.

ಗುರುವಾರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಸವನತ್ತೂರು ವಾರ್ಡಿನಲ್ಲಿರುವ ವ್ಯಕ್ತಿಯೊಬ್ಬರು ಪಂಚಾಯಿತಿ ನೀಡಿರುವ ಜಾಗಕ್ಕಿಂತ ಹೆಚ್ಚು ಜಾಗವನ್ನು ಅತಿಕ್ರಮಿಸಿ ಮನೆ ಕಟ್ಟುತ್ತಿದ್ದಾರೆ. ಇದೇ ರೀತಿ ಇನ್ನೂ ಹಲವು ಮಂದಿ ನಿಯಮ ಉಲ್ಲಂಘಿಸಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ.

ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಫಿಲೋಮಿನಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಬಡಾವಣೆ ಇರುವ ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ವಂಚಿತರು ೫೦೦ ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ಪೈಕಿ ಬಹಳಷ್ಟು ಮಂದಿ ಒಂದೇ ರೂಮಿನಲ್ಲಿ ವಾಸವಿದ್ದರೆ, ಇನ್ನೂ ಹಲವು ಮಂದಿ ತೀರಾ ಇಕ್ಕಟ್ಟಾದ ಜಾಗದಲ್ಲಿ ವಾಸವಿದ್ದಾರೆ. ಅಂತಹವರನ್ನು ಗುರುತಿಸಿ ಆದ್ಯತೆಯ ಮೇಲೆ ನಿರ್ಗತಿಕರಿಗೆ ನಿವೇಶನಗಳನ್ನು ಒದಗಿಸಬೇಕೆಂದು ಫಿಲೋಮಿನಾ ಹಾಗೂ ಸದಸ್ಯೆ ಗೌರಮ್ಮ ಒತ್ತಾಯಿಸಿದರು.

ಸದಸ್ಯರ ದೂರಿಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಪಿಡಿಓ ಸಂತೋಷ್, ಪಂಚಾಯಿತಿಯಿAದ ಸರ್ಕಾರಿ ಭೂಮಿ ಸಂರಕ್ಷಿಸಲಾಗುತ್ತಿದೆ.

ಹಿಂದಿನ ಅವಧಿಯಲ್ಲಿ ಪಂಚಾಯಿತಿಯಲ್ಲಿ ಕೊಟ್ಟಿರುವ ಹಕ್ಕುಪತ್ರಗಳನ್ನು ಹೊರತುಪಡಿಸಿ ಪ್ರಸಕ್ತ ಸರ್ಕಾರದ ನಿರ್ದೇಶನಗಳ ಅನುಸಾರವೇ ಕ್ರಮ ವಹಿಸಲಾಗುತ್ತಿದೆ ಎಂದರು.

ಇನ್ನೇನು ಮುಂಗಾರು ಮಳೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಆಗಬಹುದಾದ ಅವಘಡಗಳನ್ನು ತಡೆಯಲು ಪಂಚಾಯಿತಿಯಿAದ ಅಗತ್ಯ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುವ ಸಂಬAಧ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ಮೃತಪಟ್ಟ ಸದಸ್ಯ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರನಾಯಕ್, ಹಿರಿಯ ಸದಸ್ಯ ಕೆ.ಕೆ. ಭೋಗಪ್ಪ, ಪಾರ್ವತಮ್ಮ, ಖತೀಜಾ, ಈರಯ್ಯ, ದಿನೇಶ, ಷಂಶುದ್ದೀನ್, ಮಣಿಕಂಠ, ಗಿರೀಶ್ ಮೊದಲಾದವರಿದ್ದರು.