*ಗೋಣಿಕೊಪ್ಪ, ಮೇ ೨೮: ಹಬ್ಬದ ಸಂಭ್ರಮದ ರೀತಿಯಲ್ಲಿ ತಾ. ೨೯ರ ಶಾಲಾ ಪ್ರಾರಂಭದ ದಿವಸವನ್ನು ಆಚರಿಸಲು ಮತ್ತು ಆತ್ಮೀಯವಾಗಿ ಮಕ್ಕಳನ್ನು ಸ್ವಾಗತಿಸಲು ವೀರಾಜಪೇಟೆ ತಾಲೂಕು ಮುಖ್ಯ ಶಿಕ್ಷಕರ ಸಂಘದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ವೀರಾಜಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆ ಪ್ರಾರಂಭೋತ್ಸವದ ಪೂರ್ವಭಾವಿ ತಯಾರಿ ಸಭೆಯಲ್ಲಿ ಶಾಲಾ ಪ್ರಾರಂಭದ ದಿನವೇ ಸಿಹಿಯೊಂದಿಗೆ ಬಿಸಿಯೂಟ ಪ್ರಾರಂಭ ಮಾಡುವಂತೆ, ಶಾಲೆ ಕೊಠಡಿಗಳು, ಆವರಣ, ಅಡುಗೆ ಕೋಣೆ, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು, ನೀರಿನ ಸಂಪ್ ಇತ್ಯಾದಿಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸುವುದು, ಸೇರಿದಂತೆ ಮಕ್ಕಳ ಹಾಜರಾತಿ ಪಠ್ಯ ಪ್ರವಚನಗಳು ಇನ್ನಿತರ ಚಟುವಟಿಕೆಗಳ ಬಗ್ಗೆ ಮೊದಲ ದಿನದಿಂದಲೇ ಹೆಚ್ಚಿನ ಗಮನಹರಿಸಲು ಸೂಚಿಸಲಾಯಿತು.

ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ ಅವರು ಶಾಲೆ ಪ್ರಾರಂಭೋತ್ಸವಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯ ಶಿಕ್ಷಕರುಗಳಿಗೆ ಮಾಹಿತಿ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್, ತಾಲೂಕು ಸರ್ಕಾರಿ ಪ್ರೌಢಶಾಲೆಗಳ ಅಧ್ಯಕ್ಷ ಉತ್ತಪ್ಪ ಬಿ.ಪಿ, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲೆಗಳ ಅಧ್ಯಕ್ಷ ಸುರೇಂದ್ರ ಈ, ಬಿ.ಐ.ಆರ್.ಟಿ ಅಜಿತ್ ಕರುಂಬಯ್ಯ, ೭ ಕ್ಲಸ್ಟರ್ ಸಿಆರ್‌ಪಿ, ಬಿ.ಆರ್.ಪಿಗಳು ಇದ್ದರು.