ಅಜ್ಜ-ಅಜ್ಜಿಯರ ಜೊತೆಗೆ ಲಲ್ಲೆಗರೆಯುತ್ತ, ಅಪ್ಪ-ಅಮ್ಮನ ಪ್ರೀತಿ-ಮಮತೆಯಲ್ಲಿ ತೇಲಾಡುತ್ತಾ, ಮನೆಯಲ್ಲಿ ಸುಖವಾಗಿದ್ದ ತೊದಲುನುಡಿಯ ಕೆಲ ಕಂದಮ್ಮಗಳು ಶಾಲೆ ಎಂಬ ದೇಗುಲಕ್ಕೆ ಅಡಿಯಿಡಲು ಸಜ್ಜಾಗಿವೆ. ಅಕ್ಕನೋ, ಅಣ್ಣನೋ ಸಮವಸ್ತ್ರ ಧರಿಸಿ, ಪುಸ್ತಕದ ಚೀಲವನ್ನು ಬೆನ್ನಿಗೇರಿಸಿಕೊಂಡು ಶಾಲೆಗೆ ಹೋಗಲು ತಯಾರಾಗುತ್ತಿದ್ದ ದೃಶ್ಯವನ್ನು, ಅವರನ್ನು ಶಾಲೆಗೆ ಹೊರಡಿಸುತ್ತಿದ್ದ ಅಪ್ಪ-ಅಮ್ಮನವರ ಸಂಭ್ರಮವನ್ನು ಬೆರಗುಗಣ್ಣಿನಿಂದ ಪ್ರತಿದಿನ ನೋಡುತ್ತಿದ್ದ ಚಿಣ್ಣ, ತಾನೂ ಹೊಸ ಬಟ್ಟೆ ತೊಟ್ಟು, ಹೊಸ ಚೀಲದೊಂದಿಗೆ ಶಾಲೆಗೆ ಹೊರಟಿದೆ. ಅಕ್ಕ-ಅಣ್ಣನ ಸಮವಸ್ತ್ರವನ್ನು ಹೇಗೆ ಹೇಗೋ ಮೈಗೇರಿಸಿಕೊಂಡು ‘ನಾನೂ ಶಾಲೆ' ಎನ್ನುತ್ತಿದ್ದ ಪುಟಾಣಿಗಳಿಗೆ ಅವರ ಆಸಕ್ತಿಯಂತೆ ಆಸೆಯನ್ನು ಈಡೇರಿಸಿಕೊಳ್ಳುವ, ಶಾಲೆಗೆ ಹೋಗುವ ಅವಕಾಶ ಸಿಕ್ಕಿದೆ. ಈ ಪುಟ್ಟ ಮಕ್ಕಳ ಶಾಲಾ ಆಸಕ್ತಿ ಕುಗ್ಗದಂತೆ ಕಾಯುವ, ನಾಳೆ ಅವರು ಶಾಲೆಗೆ ಹೋಗಲು ನಿರಾಕರಿಸದಂತೆ ನೋಡಿಕೊಳ್ಳುವ ಪರಿಯ ಬಗ್ಗೆ ಪೋಷಕರಿಗೂ ಒಂದಿಷ್ಟು ಕಳವಳವಿದೆ. ಶಾಲೆಗಳು ಆಕರ್ಷಣೀ ಯ ಕೇಂದ್ರಗಳಾಗಿ ಸುರಕ್ಷಿತ ವಾತಾವರಣ ಅಲ್ಲಿದ್ದಾಗ ಕುಣಿದು ಕುಪ್ಪಳಿಸಿ ಶಾಲೆಗೆ ಹೊರಡುವ ಮಕ್ಕಳು ಎಂದಿಗೂ ಶಾಲೆ - ನಾ ಒಲ್ಲೆ ಎನ್ನಲಾರವು.

ಇನ್ನು ಶಾಲೆಗೆ ಸೇರಿ ವಿದ್ಯಾಭ್ಯಾಸ ಮಾಡುತ್ತಿರುವ, ರಜಾ ದಿನಗಳನ್ನು ಕಳೆದು ಬಂದ ಮಕ್ಕಳಂತೂ ತಮ್ಮ ಒಲವಿನ ಗೆಳೆಯರ ಬಳಗ ಸೇರಲು ಕಾತುರರಾಗಿದ್ದಾರೆ. ಬೇಸಿಗೆ ರಜೆಗಾಗಿ ಕಾಯುತ್ತಾ ವರ್ಷದ ಕೊನೆಯ ಬೆಲ್ ಗಾಗಿ ಕಾತರಿಸುತ್ತಿದ್ದ ಮಕ್ಕಳು ರಜಾ ದಿನಗಳನ್ನು ಮಜವಾಗಿ ಕಳೆದು ಇದೀಗ ಹೊಸ ಶೈಕ್ಷಣಿಕ ವರ್ಷದ ಮೊದಲ ಬೆಲ್ ಗಾಗಿ ಕಾಯುತ್ತಾ ತರಗತಿಗಳಿಗೆ ಆಡಿಯಿಡಲು ಸಿದ್ದರಾಗಿದ್ದಾರೆ. ಶಾಲಾ ದಿನಗಳು ಮತ್ತೆ ಆರಂಭವಾಗಿವೆ. ಒಂದೊAದು ಶಾಲೆಗಳು ಒಂದೊAದು ವಿಭಿನ್ನ ರೀತಿಯಲ್ಲಿ ಮಕ್ಕಳನ್ನು ಸ್ವಾಗತಿಸುತ್ತಿವೆ. ಓದು... ಪರೀಕ್ಷೆ ಇತ್ಯಾದಿ ಶಾಲಾ ಕಲಿಕೆಯ ಒತ್ತಡಗಳಿಂದ ವಿರಾಮ ಪಡೆದ ಮನಸುಗಳು ಸಹಪಾಠಿಗಳೊಂದಿಗೆ ಬೆರೆಯಲು, ಹೊಸ ಆಟಗಳನ್ನು ಆಡಲು, ಹೊಸ ಪಾಠಗಳನ್ನು ಕಲಿಯಲು ಸಿದ್ದವಾಗಿವೆ. ಹೊಸ ಬ್ಯಾಗು, ಹೊಸ ಹೊಸ ಪುಸ್ತಕಗಳು, ಹೊಸ ಪೆನ್ನು ಪೆನ್ಸಿಲ್ಲುಗಳು, ಬ್ಯಾಗ್ ಗೆ ಇಳಿ ಬಿಟ್ಟ ತರ ತರದ ಕೀ ಗೊಂಚಲು... ಒಟ್ಟಿನಲ್ಲಿ ನವೋತ್ಸಾಹದ ಪಾದಗಳು ಶಾಲೆಗಳತ್ತ ಪಯಣ ಬೆಳೆಸಿವೆ.. ಹೊಸ ಹುರುಪಿನೊಂದಿಗೆ.

ಶಾಲೆಗೆ ಹೊಸದಾಗಿ ಸೇರಿದ ಮಕ್ಕಳಿಗೆ (ಜೊತೆಗೆ ಹೆತ್ತವರಿಗೆ) ಒಂದು ರೀತಿಯ ಸಂಭ್ರಮವಾದರೆ, ರಜೆ ಮುಗಿಸಿ ಮತ್ತೆ ಶಾಲೆಯತ್ತ ಹೊರಳಿದ ಮನಸುಗಳಿಗೆ ಇನ್ನೊಂದು ರೀತಿಯ ಉತ್ಸಾಹ. ರಜಾ ದಿನಗಳಲ್ಲಿ ತಾನು ನೋಡಿದ ಹೊಸ ಸ್ಥಳಗಳ ಬಗ್ಗೆ, ಆಡಿದ ತುಂಟಾಟಗಳ ಬಗ್ಗೆ, ಗಳಿಸಿದ ಹೊಸ ಹೊಸ ಜ್ಞಾನದ ಬಗ್ಗೆ ಗೆಳೆಯ ಗೆಳತಿಯರಿಗೆ ಹೇಳಿಕೊಳ್ಳುವ ಆತುರ. ಮನೆ ಮಂದಿಯ ಜೊತೆಗೆ, ನೆಂಟರಿಷ್ಟರ ಜೊತೆಗೆ ಕಳೆದ ಸನ್ನಿವೇಶಗಳನ್ನು ವಿವರಿಸುವ, ತಾನು ರಜೆಯಲ್ಲಿ ಒಗ್ಗೂಡಿಸಿಕೊಂಡ ಒಟ್ಟು ‘ಆಸ್ತಿ'(ಆಟಿಕೆ)ಗಳ ಬಗ್ಗೆ ಹೇಳಿಕೊಳ್ಳುವ ಸಂದರ್ಭಕ್ಕಾಗಿ ಮಕ್ಕಳು ಕಾಯುತ್ತಿದ್ದಾರೆ. ಅವರಿಗೆ ಮಾತನಾಡಲು ಇರುವ ವಿಷಯಗಳು ಒಂದೇ... ಎರಡೇ... ಇನ್ನು ಪ್ರೌಢ-ಪದವಿ ಪೂರ್ವ ಹಂತಕ್ಕೆ ಬಂದ ಮಕ್ಕಳಿಗೋ... ಹೊಸ ಹೊಸ ಕನಸುಗಳು... ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಛಲ.. ಇವುಗಳನ್ನು ಹೊತ್ತು ಶಾಲಾ-ಕಾಲೇಜಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ವಿದ್ಯಾ ಸಂಸ್ಥೆಗಳು ಮತ್ತೆ ಅವರನ್ನು ಕೈಬೀಸಿ ಕರೆದಿವೆ. ಎಲ್ಲ ವಯೋಮಾನದ ಮಕ್ಕಳ ದಿಟ್ಟ ಹೆಜ್ಜೆಗಳಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಲು ಶಾಲಾ-ಕಾಲೇಜುಗಳು ಸಜ್ಜಾಗಿವೆ.

ಮಕ್ಕಳು ಸದಾ ಹೊಸತನದತ್ತ ತುದಿಯುವ ಚಿಲುಮೆಗಳು. ಅವರ ಉತ್ಸಾಹವನ್ನು ಕಾಪಿಡುವ ಹೊಣೆಗಾರಿಕೆ ಹಿರಿಯರದ್ದು.ವಿದ್ಯಾರ್ಥಿಗಳಿಗೆ ಶಾಲೆ ಸೆರೆಮನೆ ಎನಿಸದಂತೆ ಇರಬೇಕಾದರೆ ಶೈಕ್ಷಣಿಕ ಸಂಸ್ಥೆಗಳ ಆಡಳಿತ ವೈಖರಿ, ಶಿಕ್ಷಕ ವೃಂದದವರ ನೂತನ ಯೋಜನೆಗಳು ಮಕ್ಕಳ ಮನ ಸೆಳೆಯುವಂತೆ ಇರಬೇಕು. ಮನೆಯಲ್ಲಿ ಮಕ್ಕಳ ನಡೆ -ನುಡಿಗಳನ್ನು ತಿದ್ದಿ ತೀಡಲು ಪೋಷಕರು ಸಾಕಷ್ಟು ಸಮಯಾವಕಾಶಗಳನ್ನು ಅವರಿಗಾಗಿ ಮೀಸಲಿಡಬೇಕು. ಬಾಹ್ಯ ಆಕರ್ಷಣೆಗಳ ಕಡೆಗೆ ಮಕ್ಕಳ ಮನಸು ವಾಲದಂತೆ ಗಮನ ಹರಿಸುತ್ತಿರಬೇಕು. ಅಗತ್ಯ ಬಂದಾಗ ಶಾಲೆಗಳಿಗೆ ಭೇಟಿ ನೀಡಲು ಮಕ್ಕಳ ಪೋಷಕರು ಮರೆಯಬಾರದು.

ಸರಕಾರಿ ಶಾಲೆಗಳಂತೂ ಚೀಲ, ಛತ್ರಿ, ಪುಸ್ತಕ, ಸಮವಸ್ತ್ರ, ಬಿಸಿ ಊಟ ಎಲ್ಲವನ್ನೂ ನೀಡಿ ಶುಲ್ಕವಿಲ್ಲದ ಪೋಷಕರಿಗೆ ಹೊರೆ ಎನಿಸದ ಶಿಕ್ಷಣ ನೀಡಲು ತಯಾರಾಗಿವೆ. ಅಂತೆಯೇ ಖಾಸಗಿ ಶಾಲೆಗಳು ಕೂಡಾ ವಿನೂತನ ವ್ಯವಸ್ಥೆಗಳನ್ನು ಮಾಡಿಕೊಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಕಲ ಸಿದ್ಧತೆ ನಡೆಸಿ ಮಕ್ಕಳಿಗೆ ಸ್ವಾಗತ ಕೋರುತ್ತಿದ್ದಾರೆ. ಹಾಗೆಯೇ ಹೊಸ ಹೊಸ ಯೋಚನೆ - ಯೋಜನೆಗಳೊಂದಿಗೆ ಶಿಕ್ಷಕ ಸಮುದಾಯ ಕೂಡಾ. ಒಟ್ಟಿನಲ್ಲಿ ಮಕ್ಕಳನ್ನು ಶಿಸ್ತುಬದ್ಧ ಜೀವನಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ಶಾಲಾ ವಾತಾವರಣ ಎಲ್ಲವೂ ಸಿದ್ಧ. ನಲಿವಿನ ಕಲಿಕೆಗೆ ಮಕ್ಕಳಿಗೆ ಸುಸ್ವಾಗತ. ಮಕ್ಕಳ ವಿದ್ಯಾಭ್ಯಾಸ ಸುಗಮವಾಗಿ ಸಾಗಲಿ. ಶಾಲಾ-ಕಾಲೇಜುಗಳ ಮೂಲಕ ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸತನದೊಂದಿಗೆ ಜ್ಞಾನಾರ್ಜನೆಗೈಯುವ ಸೌಭಾಗ್ಯವನ್ನು ದೇವರು ಎಲ್ಲ ಮಕ್ಕಳಿಗೆ ದಯಪಾಲಿಸಲಿ ಎಂದು ಆಶಿಸೋಣ. ಖಚಿತ ಗುರಿ, ಶಿಸ್ತಿನ ದಿನಚರಿಯ ಮೂಲಕ ಮಕ್ಕಳು ಬೆಳೆದು ದೇಶದ ಅಪೂರ್ವ ಸಂಪತ್ತಾಗಲಿ. ಸ್ವಾಮಿ ವಿವೇಕಾನಂದರ ಮಾತಿನಂತೆ "ಭವ್ಯ ಭಾರತದ ನವ್ಯ ಶಿಲ್ಪಿಗಳು " ಶಿಕ್ಷಣ ದೇಗುಲಗಳಲ್ಲಿ ರೂಪುಗೊಳ್ಳಲಿ.

- ಜಯಲಕ್ಷಿö್ಮ ಕೆ., ಉಪನ್ಯಾಸಕರು, ಸಂತ ಜೋಸೆಫರ ಕಾಲೇಜು, ಮಡಿಕೇರಿ.