ಕೂಡಿಗೆ, ಮೇ ೨೮: ಶ್ರೀ ದಂಡಿನಮ್ಮ ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ನಡೆದ ವಾರ್ಷಿಕ ಗ್ರಾಮ ದೇವತೆಯ ಹಬ್ಬ ಮತ್ತು ಕೊಂಡೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮವು ಎರಡೂ ದಿನಗಳಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಶುಕ್ರವಾರದಂದು ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ, ದುರ್ಗಿ ಶಾಂತಿಹೋಮ, ಬಲಿಹರಣ, ಪೂರ್ಣಾಹುತಿ, ಶ್ರೀ ದೇವಿಯ ಸಂಪ್ರೋಕ್ಷಣೆ, ಪುಣ್ಯಾಹ ಮತ್ತು ಅಷ್ಟದಿಗ್ಬಂಧನೆ, ಪಂಚಾಮೃತ ಅಭಿಷೇಕ ಮತ್ತು ಅರ್ಚನೆ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ರಾತ್ರಿ ೧೦ ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ಕೂಡಿಗೆ ಕೊಪ್ಪಲು, ಹೆಗ್ಗಡಹಳ್ಳಿ, ಕೋಟೆ ಗ್ರಾಮದ ನೂರಾರು ಭಕ್ತಾದಿಗಳು ಮಂಗಳವಾದ್ಯ, ನಾಡವಾದ್ಯಗಳ ಸಮೇತವಾಗಿ ಕಾವೇರಿ ನದಿಗೆ ತೆರಳಿ ಕಲಶ ಪೂಜೆ, ಗಂಗೆ ಪೂಜೆ ನಂತರ ಹಣ್ಣಡಗೆ ಉತ್ಸವವು ಕಾವೇರಿ ನದಿಯಿಂದ ದಂಡಿನಮ್ಮ ದೇವಸ್ಥಾನದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದಂಡಿನಮ್ಮ ದೇವಾಲಯವನ್ನು ತಲುಪಿತು. ಕಾವೇರಿ ನದಿಯಿಂದ ಮೆರವಣಿಗೆ ಮೂಲಕ ಬಂದ ಕಲಶ ಹಿಡಿದ ಮಹಿಳೆಯರು, ಭಕ್ತರು, ಯುವಕರು ಕೊಂಡೋತ್ಸವದಲ್ಲಿ ಭಾಗವಹಿಸಿ ದ್ದರು. ನಂತರ ದೇವಾಲಯ ಆವರಣದಲ್ಲಿ ಮುಂಜಾನೆಯ ಉಯ್ಯಾಲೆ ಮಹೋತ್ಸವವು ನಡೆಯಿತು. ಪೂಜಾ ಕೈಂಕರ್ಯ ಗಳನ್ನು ಚಂದ್ರಮುರುಳಿ ಆರಾಧ್ಯ ಮತ್ತು ಕಣಿವೆ ರಾಮಲಿಂಗೇಶ್ವರ ದೇವಾಲಯದ ಅರ್ಚಕ ರಾಘವೇಂದ್ರ ಆಚಾರ್ ತಂಡದವರಿAದ ನಡೆದವು. ಈ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಿತು.

ಮರುದಿನ ಶನಿವಾರ ಶ್ರೀ ದಂಡಿನಮ್ಮ ದೇವಿಗೆ ಪೂಜೆ, ಮಹಾಮಂಗಳಾರತಿ, ದೇವಾಲಯ ಆವರಣದಲ್ಲಿ ಜಾತ್ರೋತ್ಸವವು ನಡೆಯಿತು ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ವನ್ನು ನೆರವೇರಿತು.

ಪೂಜೋತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ ಹೆಗ್ಗಡಹಳ್ಳಿ, ಮಾದಲಾಪುರ ಸೀಗೆಹೊಸೂರು, ಭುವನಗಿರಿ, ಕೂಡುಮಂಗಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಗಿರೀಶ್, ಉಪಾಧ್ಯಕ್ಷ ಕೆ.ಪಿ. ಪ್ರಕಾಶ್, ಕಾರ್ಯದರ್ಶಿ ಗುರುಪಾದಸ್ವಾಮಿ ಆರಾಧ್ಯ, ರಾಜಶೇಖರ, ಗೌರವ ಅಧ್ಯಕ್ಷ ಕೆ.ಕೆ. ಭೀಮಣ್ಣ, ನಿಕಟಪೂರ್ವ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಕೆ.ಪಿ. ಸೋಮಣ್ಣ, ನಿರ್ದೇಶಕರಾದ ಕೆ.ಕೆ. ಸೋಮ ಶೇಖರ್, ಕೆ.ಎಸ್. ಚಂದ್ರಶೇಖರ್, ಕೆ.ಪಿ. ರಾಜು ಸೇರಿದಂತೆ ಸಮಿತಿಯ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.