ಮಡಿಕೇರಿ, ಮೇ ೨೮: ಮಡಿಕೇರಿ ನಗರಸಭಾ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರುಗಳು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶ ಮತ್ತು ೧೯೬೪ ರ ಪೌರಸಭೆಗಳ ಅಧಿನಿಯಮದಂತೆ, ಕಟ್ಟಡ ಮತ್ತು ಖಾಲಿ ನಿವೇಶನಗಳಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪ್ರತಿ ವರ್ಷ ಸಂದಾಯ ಮಾಡಬೇಕಾಗಿದ್ದು, ಅದರಂತೆ ಆಸ್ತಿಯ ಮಾಲೀಕರುಗಳು ಸಂದಾಯ ಮಾಡುತ್ತಿದ್ದಾರೆ.

ಸಂದಾಯ ಮಾಡಿದ ನಂತರ ಪ್ರತಿಯೊಬ್ಬರೂ ರಿನಿವಲ್ ನಮೂನೆ ೩ ನ್ನು ಪಡೆಯಲು ಅರ್ಜಿ ಸಲ್ಲಿಸುತ್ತಿರುವುದು ಹಾಗೂ ಇದಕ್ಕೋಸ್ಕರ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬಂದಿದ್ದು, ಎಲ್ಲರೂ ಅರ್ಜಿ ಸಲ್ಲಿಸಿ ನಮೂನೆ ೩ ನ್ನು ಪಡೆಯುವ ಅವಶ್ಯಕತೆ ಇರುವು ದಿಲ್ಲ. ಆದರೆ ಅಗತ್ಯವಾಗಿ ಮಾರಾಟ, ಸಾಲ ಪಡೆಯುವಿಕೆ, ಮುಂತಾದ ವ್ಯವಹಾರ ಮತ್ತು ಸೇವೆಗಳಿಗೆ ಅಗತ್ಯವಿದ್ದವರು ಮಾತ್ರ ರಿನಿವಲ್ ನಮೂನೆ ೩ನ್ನು ಪಡೆದುಕೊಳ್ಳುವುದು ಸೂಕ್ತವಾಗಿದೆ. ಇದನ್ನು ಹೊರತುಪಡಿಸಿ, ಎಲ್ಲರೂ ಕಡ್ಡಾಯವಾಗಿ ನಮೂನೆ ೩ ನ್ನು ಪಡೆಯುವಂತಹ ಅವಶ್ಯಕತೆ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ವಿಜಯ ತಿಳಿಸಿದ್ದಾರೆ.