ಕೂಡಿಗೆ, ಮೇ ೨೮: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿರುವ ಆನೆ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಮತ್ತೊಮ್ಮೆ ಸರ್ವೆ ನಡೆಸಿ ತೆರವು ಗೊಳಿಸುವಂತೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಮಾಡಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆ ಕೆರೆಯ ಜಾಗವು ಒತ್ತುವರಿ ಆಗಿದೆ ಎಂದು ಕಳೆದ ನಾಲ್ಕು ತಿಂಗಳುಗಳಿAದ ಏಳು ಬಾರಿ ಸರ್ವೆ ನಡೆಸಿದರೂ ಸಹ ಸರ್ವೆ ಸಮರ್ಪಕವಾಗಿಲ್ಲ, ಇನ್ನೂ ಕೆಲವು ಮಂದಿ ಒತ್ತುವರಿ ಮಾಡಿ ಕೊಂಡಿರುತ್ತಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಫಿಲೋಮಿನಾ, ದಿನೇಶ್, ಗೌರಮ್ಮ ಸೇರಿದಂತೆ ಸದಸ್ಯರು ಮತ್ತೊಮ್ಮೆ ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಲು ಗ್ರಾಮ ಪಂಚಾಯಿತಿ ವತಿಯಿಂದ ಪತ್ರವ್ಯವಹಾರ ಮಾಡುವಂತೆ ಒತ್ತಾಯ ಮಾಡಿದರು.

ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರ ನೀಡಿರುವ ಹಕ್ಕು ಪತ್ರಗಳ ಆಧಾರದ ಮೇಲೆ ತಮ್ಮ ಮನೆಗಳನ್ನು ನಿರ್ಮಿಸಲು ಅನುಮತಿ ಇದ್ದರೂ ಸಹ ಹೆಚ್ಚುವರಿಯಾಗಿ ಪೈಸಾರಿಯಾಗಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗೆ ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು.

ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಮುನ್ನೆಚ್ಚರಿಕೆ ವಹಿಸುವ ಕ್ರಮಗಳ ಬಗ್ಗೆ ಚರ್ಚೆಗಳು ನಡೆದವು.

ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳನ್ನು ಸಭೆಯ ಗಮನಕ್ಕೆ ತರಲಾಯಿತು.

ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಆನೆಕೆರೆಯ ಸರ್ವೆಯನ್ನು ಏಳು ಬಾರಿ ಕಂದಾಯ ಇಲಾಖೆಯ ಮೂಲಕ ನಡೆಸಲಾಗಿದೆ. ಆದರೆ ಇಲಾಖೆಯವರು ಗುರುತಿಸಿದ ಜಾಗಕ್ಕೆ ಬೇಲಿ ನಿರ್ಮಾಣ ಮಾಡಬೇಕಾಗಿದೆ, ಆದರೂ ಸದಸ್ಯರು ಸಭೆಯಲ್ಲಿ ತಿಳಿಸಿದ ಮೇರೆಗೆ ಕಂದಾಯ ಇಲಾಖೆಗೆ ಪತ್ರವ್ಯವಹಾರ ಮಾಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.