ಸಿದ್ದಾಪುರ, ಮೇ ೨೭: ಕರಡಿಗೋಡು-ಗುಹ್ಯ ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟೀಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಕಾವೇರಿ ನದಿ ದಡದಲ್ಲಿ ವಾಸಿಸುವ ನಿವಾಸಿಗಳು ಪ್ರವಾಹ ಮುಂಚಿತವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮುಖಾಂತರ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರ ಸೂಚನೆ ಮೇರೆಗೆ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ೨೦೦ಕ್ಕೂ ಅಧಿಕ ಕುಟುಂಬಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಓಮಪ್ಪ ಬಣಾಕರ್, ಗ್ರಾಮ ಸಹಾಯಕ ಕೃಷ್ಣನ್ಕುಟ್ಟಿ, ಗ್ರಾ.ಪಂ ಲೆಕ್ಕಾಧಿಕಾರಿ ಸುಬ್ರಮಣಿ ಹಾಜರಿದ್ದರು.