ಗೋಣಿಕೊಪ್ಪಲು, ಮೇ ೨೭: ಕಾಫಿ ತೋಟವೊಂದರಲ್ಲಿ ತಳಮಟ್ಟದಲ್ಲಿ ಹಾದು ಹೋಗಿದ್ದ ೧೧ ಕೆವಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಕಾಡಾನೆಯೊಂದು ಮೃತಪಟ್ಟ ಘಟನೆ ಕುಟ್ಟ ಬಳಿಯ ಕಾಳಿ ದೇವಸ್ಥಾನದ ಸಮೀಪವಿರುವ ಕಾಫಿ ತೋಟದಲ್ಲಿ ನಡೆದಿದೆ.
ಪ್ರವರ್ಧನ್ ಪೂಜಾರಿ ಎಂಬವರ ಸ್ವಾಧೀನದ ಕಾಫಿ ತೋಟದಲ್ಲಿ ಸಂಚರಿಸುತ್ತಿದ್ದ ವೇಳೆ ೧೧ ಕೆವಿ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ಸ್ಪರ್ಶಿಸಿದೆ. ಈ ವೇಳೆ ವಿದ್ಯುತ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದೆ. ತೋಟಕ್ಕೆ ಕಾರ್ಮಿಕರು ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸೆಸ್ಕ್ ಇಲಾಖೆಯ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ನಿರಂತರ ಕಾಡಾನೆಗಳು ಕಾಫಿ ತೋಟದಲ್ಲಿ ಸಂಚರಿಸುತ್ತಿವೆ.
ಮೃತ ಕಾಡಾನೆಯು ೪೦ರಿಂದ ೪೫ ವರ್ಷದ ಪ್ರಾಯದ ಗಂಡಾನೆಯಾಗಿದೆ. ವೀರಾಜಪೇಟೆ ಡಿಸಿಎಫ್ ಶರಣ ಬಸಪ್ಪ ಹಾಗೂ ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಸಂಜೆಯ ವೇಳೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ವೈದ್ಯರಾದ ಡಾ.ಚಿಟ್ಟಿಯಪ್ಪ ಇವರಿಂದ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ಸ್ಥಳದಲ್ಲಿಯೇ ಆನೆಯ ಅಂತ್ಯಕ್ರಿಯೆ ನಡೆಸಲಾಯಿತು. ಕಾಡಾನೆ ಮೃತಪಟ್ಟ ಬಗ್ಗೆ ಪ್ರಕರಣ ದಾಖಲಾಗಿದೆ. -ಹೆಚ್.ಕೆ.ಜಗದೀಶ್