ನಾಪೋಕ್ಲು, ಮೇ ೨೮: ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿರುವುದರಿಂದ ಈ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸುವಂತಾಗಿದೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿಯ ಶಕ್ತಿ ಕೇಂದ್ರದ ವತಿಯಿಂದ ಭಾಜಪ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆ ಹಾಗೂ ಕೆ.ಜಿ. ಬೋಪಯ್ಯ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಯನ್ನು ಮತದಾರರು ಮರೆತಿದ್ದಾರೆ. ರಾಜ್ಯದಲ್ಲಿ ೧೫೦ಕ್ಕೂ ಅಧಿಕ ಸೀಟುಗಳನ್ನು ಪಡೆಯುವ ನಿರೀಕ್ಷೆಯಿತ್ತು. ಅತಿಯಾದ ಆತ್ಮವಿಶ್ವಾಸ ಪಕ್ಷಕ್ಕೆ ಮುಳುವಾಗಿದೆ. ಪ್ರಣಾಳಿಕೆಯಲ್ಲಿನ ಲೋಪ, ಅಂತಿಮ ಹಂತದಲ್ಲಿ ಅಭ್ಯರ್ಥಿಯ ಆಯ್ಕೆ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡುಗಳ ಆಮಿಷ, ಜಾತಿ ರಾಜಕೀಯದಿಂದ ಸೋಲು ಉಂಟಾಗಿದೆ ಎಂದರು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ. ಸೋತರೂ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದರು.

ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ಕಾರ್ಯಕರ್ತರು ಜಾಗೃತರಾಗಿರಬೇಕು. ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವುದರ ಮೂಲಕ ಪಕ್ಷದ ಸಂಘಟನೆಯನ್ನು ಅಭಿವೃದ್ಧಿಪಡಿಸಿ ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷ ಅತ್ಯಧಿಕ ಮತಗಳಿಂದ ವಿಜೇತರಾಗಬೇಕು ಹಾಗೂ ಕೆ.ಜಿ. ಬೋಪಯ್ಯ ನವರಿಗೆ ಉತ್ತಮ ಸ್ಥಾನಮಾನ ದೊರಕುವಂತಾಗಬೇಕೆAದರು. ಸ್ಥಳೀಯ ಮುಖಂಡರಾದ ಸೀತಾರಾಮ ಪೆರಾಜೆ, ಸುಭಾಷ್ ಚಂದ್ರ ಬಂಗಾರ ಕೋಡಿ, ಉದಯ ಚಂದ್ರ ಕುಂಬಳಚೇರಿ, ಎ.ಸಿ. ಹೊನ್ನಪ್ಪ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಕಲಾ ಬಾಲಚಂದ್ರ, ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಧನಂಜಯ ಕೋಡಿ ಉಪಸ್ಥಿತರಿದ್ದರು. ಪೆರಾಜೆ ಶಕ್ತಿ ಕೇಂದ್ರದ ಸಂಚಾಲಕ ನಂಜಪ್ಪ ನಿಡ್ಯಮಲೆ ಸ್ವಾಗತಿಸಿದರು. ಮಡಿಕೇರಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ವಂದಿಸಿದರು.