.

ಕಣಿವೆ, ಮೇ ೨೫: ದುಬಾರೆಯ ಸಾಕಾನೆಯ ಶಿಬಿರದ ಅರಣ್ಯದಲ್ಲಿ ನಂಜರಾಯಪಟ್ಟಣ ವ್ಯಾಪ್ತಿಯ ಸುತ್ತಲಿನ ಗ್ರಾಮಗಳ ಕೃಷಿಕರು ಸಾಕಿದಂತಹ ದನಗಳ ರಾಶಿ ಸಾಮಾನ್ಯವಾಗಿ ಕಂಡುಬರುತ್ತಿದೆ.

ಅಂದರೆ ಇಲ್ಲಿನ ರಾಸುಗಳು ತಮ್ಮ ಪಾಲಕನ ಮನೆಗೆ ಅಥವಾ ಕೊಟ್ಟಿಗೆಗೆ ಹೋಗುವ ಪ್ರಮೇಯವೇ ಇಲ್ಲವಂತೆ. ಹಾಗಾಗಿ ಈ ದನಗಳನ್ನು ವಾರಸುದಾರರೇ ಇಲ್ಲದ ಬೀಡಾಡಿ ದನಗಳು ಎಂದು ಕರೆಯಬಹುದು.

ಕಾಡಿನಲ್ಲೇ ಹುಲ್ಲು ಸೊಪ್ಪು ತಿಂದು ಹಸಿವು ನೀಗಿಸಿಕೊಂಡು ಅಲ್ಲೇ ಕಾವೇರಿ ನದಿಯಲ್ಲಿ ನೀರು ಕುಡಿದು ದಣಿವಾರಿಸಿಕೊಂಡು ಅಲ್ಲೇ ಕಾಡಿನಲ್ಲಿ ಹಾಯಾಗಿ ಇರುತ್ತವೆ ಈ ಗೋವುಗಳು.

ಕಾಡಿನಲ್ಲೇ ಕೆಲವೊಂದು ಬಾರಿ ಕರುಗಳನ್ನು ಹಾಕುವ ಈ ಗೋವುಗಳು ಅಲ್ಲಿಯೇ ಕರುಗಳ ಆರೈಕೆ ಮಾಡಿಕೊಂಡು ಕರುಗಳಿಗೆ ಹಾಲು ಕುಡಿಸಿಕೊಂಡು ಇರುತ್ತವೆ. ಅಂದರೆ ಇಲ್ಲಿನ ಕೃಷಿಕರ ಪಾಲಿಗೆ ಬೀಡಾಡಿ ದನಗಳಾಗಿರುವ ಈ ರಾಸುಗಳನ್ನು ಕಟ್ಟುವ ಅಥವಾ ಕಾಯುವ ಇರಾದೆಯೇ ಇಲ್ಲ. ಗರ್ಭ ಧರಿಸಿರುವಂತಹ ಹಸುಗಳನ್ನಾದರೂ ಮರಳಿ ಕಾಡಿನಿಂದ ಮನೆಗೆ ಒಯ್ದು ಹಾಲು ಕರೆದು ತಾವು ಕುಡಿಯುವ ಗೋಜಿಗೂ ಈ ಕೃಷಿಕರು ಹೋಗಲ್ಲ ಅಂತಾರೆ ಇಲ್ಲಿನ ಗಿರಿಜನ ನಿವಾಸಿಗಳು.

ಸುಮಾರು ೧೫೦ ರಿಂದ ೨೦೦ ಸಂಖ್ಯೆಯಲ್ಲಿರುವ ಈ ದನಗಳು ಕಳೆದ ಅನೇಕ ವರ್ಷಗಳಿಂದಲೂ ಇದೇ ದುಬಾರೆಯ ಸಾಕಾನೆಯ ಶಿಬಿರದಲ್ಲಿ ಸಾಕಾನೆಗಳ ಸಾಂಗತ್ಯದೊAದಿಗೆ ಹಾಯಾಗಿ ದಿನಗಳೆಯುತ್ತಿವೆೆ.

ಸಾಕಾನೆಗಳು ಅಥವಾ ಕಾಡಾನೆಗಳು ಕೃಷಿಕರ ಭೂಮಿಗೆ ಅಂದರೆ ಅವರ ಹೊಲ - ಗದ್ದೆ, ತೋಟಗಳಿಗೆ ಏನಾದರೂ ಬಂದು ಅವರು ಬೆಳೆದಂತಹ ಬೆಳೆ, ಹುಲ್ಲು ಸೊಪ್ಪು ತಿಂದರೆ ಅಯ್ಯೋ ಆನೆ ಹಾವಳಿ, ಬೆಳೆ ನಷ್ಟ ಎಂದು ಬೊಬ್ಬೆ ಇಡುವ ಕೃಷಿಕರು, ತಾವು ಸಾಕಿದಂತಹ ಜಾನುವಾರುಗಳು ಆನೆಯ ಜಾಗಕ್ಕೆ ತೆರಳಿ ಅಂದರೆ ಕಾಡಿಗೆ ತೆರಳಿ ಕಾಡಾನೆಗಳಿಗೆ ಮೀಸಲಾದ ಹುಲ್ಲು, ಸೊಪ್ಪು ಸೆದೆಗಳನ್ನು ತಿಂದರೆ ಇವರಿಗೆ ಯಾವ ನಷ್ಟವೂ ಇಲ್ಲ. ಅಂದರೆ ಇವರು ಬೆಳೆದಂತಹ ಬೆಳೆ ಅಥವಾ ಫಸಲು ಆನೆಗಳ ಪಾಲಾದರೆ ಮಾತ್ರ ಇವರಿಗೆ ಸಂಕಟ. ಇವರ ದನಗಳು ಕಾಡಿಗೆ ಹೋಗಿ ಅಲ್ಲಿನ ಹುಲ್ಲು ಸೊಪ್ಪು ತಿಂದರೆ ಇವರಿಗೆ ಸಂತಸ.

ಹುಲಿ ದಾಳಿಗೆ ದನಗಳ ಬಲಿ

ಇದೇ ದುಬಾರೆಯ ಕಾಡಿನಲ್ಲಿ ಹುಲಿಗಳು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಇಲ್ಲ್ಲಿನ ಗಿರಿಜನ ವಾಸಿಗಳು ಇಲ್ಲಿ ಕಾಡಿನೊಳಗೆ ಹುಲ್ಲು ಸೊಪ್ಪು ತಿನ್ನುವ ಜಾನುವಾರುಗಳನ್ನು ಹಿಡಿದು ಕೊಂದು ಜೀವ ತೆಗೆದಿರುವ ಬಗ್ಗೆಯೂ ‘ಶಕ್ತಿ'ಗೆ ಹೇಳುತ್ತಾರೆ.

ಇಲ್ಲಿರುವ ನೂರಾರು ಸಂಖ್ಯೆಯ ಜಾನುವಾರುಗಳಿಗೆ ವಾರಸುದಾರರು ಇಲ್ಲ. ಹಾಗಾಗಿ ಈ ದನಗಳು ಕೂಡ ನಮ್ಮೊಂದಿಗೆ ನಮ್ಮ ಸಾಕಾನೆಗಳ ಜೊತೆ ಒಗ್ಗೆ ಹೋಗಿವೆ ಎನ್ನುತ್ತಾರೆ ಗಿರಿಜನ ವಾಸಿ ಜೆ.ಕೆ. ಡೋಬಿ. ಕಾವೇರಿ ನದಿಯಲ್ಲಿ ನೀರು ತುಂಬಿ ಹರಿಯುವಾಗ ಕೂಡ ಈ ದನಗಳು ತುಂಬಿ ಹರಿವ ಕಾವೇರಿ ನದಿಯಲ್ಲಿ ಈಜಿ ಅರಣ್ಯ ಸೇರುತ್ತವೆ. - ಕೆ.ಎಸ್. ಮೂರ್ತಿ