ಸೋಮವಾರಪೇಟೆ, ಮೇ ೨೫: ಗಿರಿಜನರಿಗೆ ಸರ್ಕಾರದಿಂದ ದೊರಕುವ ಯಾವುದೇ ಸೌಲಭ್ಯಗಳು ಸರಿಯಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಜೇನುಕುರುಬರ ತಾಲೂಕು ಯುವ ಸೇವಾ ಸಮಿತಿ ಅಧ್ಯಕ್ಷ ಜೆ.ಎ. ಶ್ಯಾಮ್ ಹೇಳಿದ್ದಾರೆ.

ಮೂಲನಿವಾಸಿ ಗಿರಿಜನರಿಗೆ ಇರುವಂತಹ ಪಿಸಿಡಿ ಯೋಜನೆ ಅಡಿಯಲ್ಲಿ ಬರುವಂತಹ ಫಲಾನುಭವಿ ಪಟ್ಟಿಯನ್ನು ತಯಾರಿಸಲು ಮತ್ತು ಯೋಜನೆಗಳನ್ನು ರೂಪಿಸಲು ಜಿಲ್ಲಾ ಪಿವಿಟಿಜಿಎಸ್ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಗೆ ಸದಸ್ಯರನ್ನಾಗಿ ರಾಜಕೀಯ ಮುಖಂಡರನ್ನು ನೇಮಿಸುವುದರಿಂದ, ಇವರು ತಮ್ಮ ಪಕ್ಷಗಳ ಸದಸ್ಯರಿಗೆ ಯೋಜನೆಯನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ನಿಜವಾದ ಗಿರಿಜನರಿಗೆ ಆಗುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದು ಶ್ಯಾಮ್ ದೂರಿದ್ದಾರೆ.

ರಾಜಕೀಯ ರಹಿತವಾಗಿ, ಸಾಮಾಜಿಕ ನ್ಯಾಯ ಒದಗಿಸುವಂತಹ ಯುವ ಸಮುದಾಯದ ಮುಖಂಡರುಗಳನ್ನು ಸೇರ್ಪಡೆ ಮಾಡಿ ಸಮಿತಿ ರಚಿಸಬೇಕು. ಆ ಮೂಲಕ ಮೂಲ ನಿವಾಸಿ ಗಿರಿಜನರಿಗೆ ಸೌಲಭ್ಯ ಕಲ್ಪಿಸಬೇಕು. ತಪ್ಪಿದ್ದಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.