ಕರಿಕೆ, ಮೇ ೨೬: ಜನರಿಗೆ ಆರೋಗ್ಯ ನೀಡುವ ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳಿಗೆ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಸರಕಾರ ನಾನಾ ರೀತಿಯ ಯೋಜನೆ ಯನ್ನು ಜಾರಿಗೆ ತಂದರೂ ಕೂಡ ಗ್ರಾಮೀಣ ಪ್ರದೇಶ ಹಾಗೂ ಗುಡ್ಡಗಾಡು ಗ್ರಾಮವಾದ ಕರಿಕೆಯಲ್ಲಿ ಈ ಎಲ್ಲಾ ಯೋಜನೆ ಮಾತ್ರ ವಿಫಲತೆ ಕಾಣುತ್ತಿದೆ. ಗ್ರಾಮದ ಆಯುರ್ವೇದ ಆಸ್ಪತ್ರೆ ಹಾಗೂ ಆರೋಗ್ಯ ವಿಸ್ತರಣಾ ಕೇಂದ್ರದಲ್ಲಿ ಎರಡು ವೈದ್ಯಧಿಕಾರಿಗಳು ಹಾಗೂ ನಾಲ್ಕೆöÊದು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಆಶಾ ಕಾರ್ಯಕರ್ತರು ಕೂಡ ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇದಲ್ಲದೆ ದಿನನಿತ್ಯ ಹತ್ತಾರು ಮಂದಿ ಮಕ್ಕಳಿಂದ ವಯೋವೃದ್ಧರಾದಿ ಗ್ರಾಮಸ್ಥರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು ಇವರಿಗೆ ಕುಡಿಯಲು ನೀರಿನ ಕೊರತೆ ಕಾಣುತ್ತಿದೆ. ಆರೋಗ್ಯ ಕೇಂದ್ರದ ಆವರಣದಲ್ಲಿ ಕುಡಿಯುವ ನೀರಿನ ತೆರೆದ ಬಾವಿ ಇದ್ದು ಗಿಡ ಗಂಟಿಗಳು ಬೆಳೆದು ಬಾವಲಿಗಳ ಆವಾಸಸ್ಥಾನ ಆಗಿದೆ. ಇದನ್ನು ಸ್ವಚ್ಛಗೊಳಿಸದೆ ನೀರು ಕುಡಿಯುವ ಸ್ಥಿತಿಯಲ್ಲಿ ಇಲ್ಲ. ಇದೀಗ ಆಸ್ಪತ್ರೆ ಸಿಬ್ಬಂದಿಗಳು ಖಾಸಗಿ ಯವರ ಮನೆಯಿಂದ ಕೊಡಗಳಲ್ಲಿ ನೀರನ್ನು ಹೊತ್ತು ತರುತ್ತಿದ್ದು, ಸರಕಾರ ಕುಡಿಯುವ ನೀರಿನ ಹತ್ತಾರು ಯೋಜನೆ ಜಾರಿಗೆ ತಂದರು ಕೂಡ ಇನ್ನೂ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಜನತೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿಜವಾಗಿಯೂ ಸಾರ್ವಜನಿಕರು ತಲೆ ತಗ್ಗಿಸುವ ಪರಿಸ್ಥಿತಿಯಂತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೂಡಲೇ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವತ್ತ ತುರ್ತು ಗಮನ ಹರಿಸಲೆಂಬುದೇ ಗ್ರಾಮಸ್ಥರ ಆಶಯ.
- ಸುಧೀರ್ ಹೊದ್ದೆಟ್ಟಿ