ಸಿದ್ದಾಪುರ, ಮೇ ೨೪: ಮಿತಿ ಮೀರಿದ ಕಾಡಾನೆ ಹಾವಳಿಗೆ ವಾಲ್ನೂರು - ತ್ಯಾಗತ್ತೂರು ಗ್ರಾಮಸ್ಥರು ಸೇರಿದಂತೆ ಸ್ಥಳೀಯ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಕಾಡಾನೆಯು ಕೃಷಿಕರ ಬೆಳೆ ನಾಶ ಮಾಡುತ್ತಿರುವ ಬೆನ್ನಲ್ಲೇ ಇದೀಗ ವ್ಯಾಪ್ತಿಯ ಮನೆಯ ಮೇಲೆ ದಾಳಿ ನಡೆಸಿ ಮನೆಗೆ ಹಾನಿಯುಂಟು ಮಾಡಿರುವ ಘಟನೆಯು ಸ್ಥಳೀಯರ ನಿದ್ದೆಗೆಡಿಸಿದೆ.

ವಾಲ್ನೂರು ತ್ಯಾಗತ್ತೂರು ನಿವಾಸಿ ಜಿ.ಕೆ. ಮಲ್ಲಪ್ಪ ಎಂಬವರ ಮನೆಗೆ ಬುಧವಾರ ಬೆಳಿಗ್ಗೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಮನೆಯ ಮೇಲ್ಛಾವಣಿ ಮುರಿದಿದೆ. ಗೋಡೆಗಳು ಬಿರುಕು ಬಿಟ್ಟಿವೆೆ. ಮನೆಯೊಳಗಿದ್ದ ದಂಪತಿ ಕಿರುಚಾಟದಿಂದ ಆನೆ ಸ್ಥಳದಿಂದ ತೆರಳಿದ್ದು, ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.