ಸೋಮವಾರಪೇಟೆ,ಮೇ.೨೩: ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಭಾರತೀಯ ಜನತಾ ಪಾರ್ಟಿಯ ಅವಲೋಕನ ಸಭೆಯಲ್ಲಿ ಕಾರ್ಯಕರ್ತರು ಮಾರಾಮಾರಿಗೆ ಇಳಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಸೋಮವಾರಪೇಟೆ ಮಂಡಲ ಬಿಜೆಪಿ ಅವಲೋಕನ ಸಭೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಸೋಲಿನ ಬಗ್ಗೆ ಅವಲೋಕನ ನಡೆಸುವ ಸಂದರ್ಭ ಕಾರ್ಯಕರ್ತರ ನಡುವೆ ಹೊಡೆದಾಟ ಜರುಗಿದ್ದು, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ವೇದ್ಯವಾಗಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಎದುರಾದ ಬಿಜೆಪಿಯ ಸೋಲಿನಿಂದ ನಿಷ್ಠಾವಂತ ಕಾರ್ಯಕರ್ತರು ಹತಾಶರಾಗಿದ್ದು, ಅದರ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇಂದು ಆಯೋಜನೆ ಗೊಂಡಿದ್ದ
(ಮೊದಲ ಪುಟದಿಂದ) ಅವಲೋಕನ ಸಭೆಯಲ್ಲಿ ಮುಖಂಡರುಗಳ ಮೇಲಿನ ಆಕ್ರೋಶ ಹೊರಬಂದಿದ್ದು, ಅಂತಿಮವಾಗಿ ಹೊಡೆದಾಟಕ್ಕೆ ವೇದಿಕೆಯ ನ್ನೊದಗಿಸಿದೆ.
ಸಭೆಯ ಆರಂಭದಲ್ಲಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿ, ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಿದ್ದು, ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ ಸಲ್ಲಿಸುವ ಹಿನ್ನೆಲೆ ಸಭೆಯನ್ನು ಕರೆಯಲಾಗಿದೆ. ಚುನಾವಣೆಯ ಸೋಲಿನಿಂದ ತಾನು ಈಗಾಗಲೇ ಮಂಡಲ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಜಿಲ್ಲಾಧ್ಯಕ್ಷರಿಗೆ ಪತ್ರ ರವಾನೆ ಮಾಡಿದ್ದೇನೆ. ಕಾರ್ಯಕರ್ತರು ಚುನಾವಣೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದರು.
ಈ ಸಂದರ್ಭ ಎದ್ದುನಿಂತ ನೇಗಳ್ಳೆ ಜೀವನ್ ಅವರು, ಪಕ್ಷದ ಜಿಲ್ಲಾ ಮುಖಂಡರು ಚುನಾವಣೆಯ ತಯಾರಿ ಸಂದರ್ಭವೇ ಈ ಬಾರಿ ಸಾಕಷ್ಟು ಬದಲಾವಣೆಗಳು ಆಗಬಹುದು ಎಂದು ಹೇಳಿಕೆ ನೀಡುತ್ತಿದ್ದರು. ಇದರಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿತು. ಎದುರಾಳಿ ಅಭ್ಯರ್ಥಿಗಳೂ ಸಹ ಈ ‘ಬದಲಾವಣೆ’ಯ ವಿಷಯವನ್ನೇ ಮುಂದಿಟ್ಟುಕೊAಡು ಚುನಾವಣೆ ಎದುರಿಸಿದರು. ಹೀಗಾಗಿ ನಮಗೆ ಸೋಲಾಗಿದೆ. ‘ಬದಲಾವಣೆ’ ಎಂದು ಹೇಳಿಕೆ ನೀಡುತ್ತಿದ್ದ ಬಗ್ಗೆ ಜಿಲ್ಲಾಧ್ಯಕ್ಷರು ವಿವರಣೆ ನೀಡಬೇಕೆಂದು ಒತ್ತಾಯಿಸಿದರು ಎನ್ನಲಾಗಿದೆ.
ಈ ಸಂದರ್ಭ ವೇದಿಕೆಯಲ್ಲಿದ್ದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ ಎನ್ನಲಾಗಿದ್ದು, ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೇ ಸ್ವತಃ ಜಿಲ್ಲಾಧ್ಯಕ್ಷರಿಗೆ ಈ ಬಗ್ಗೆ ಸಮಜಾಯಿಷಿಕೆ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭ ರಂಜನ್ಗೆ ಸೆಡ್ಡು ಹೊಡೆದ ಜಿಲ್ಲಾಧ್ಯಕ್ಷರು ನೀವು ಮಾತನಾಡಿ, ನಾನು ಆಮೇಲೆ ಮಾತನಾಡುತ್ತೇನೆ ಎಂದರು. ಇದಕ್ಕೆ ಅಸಮಾಧಾನ ಗೊಂಡ ಕಾರ್ಯ ಕರ್ತರು ಸಭೆಯಲ್ಲಿ ಗಲಾಟೆಯೆಬ್ಬಿಸಿದರು ಎನ್ನಲಾಗಿದೆ.
ಜಿಲ್ಲಾಧ್ಯಕ್ಷರನ್ನು ಪ್ರಶ್ನಿಸಿದ ಸಂದರ್ಭ ಮಧ್ಯೆ ಪ್ರವೇಶಿಸಿದ ಶನಿವಾರಸಂತೆಯ ರಘು ಅವರು, ಜಿಲ್ಲಾಧ್ಯಕ್ಷರನ್ನು ಮಾತ್ರ ಯಾಕೆ ಆಗ್ರಹಿಸುತ್ತೀರಿ? ಎಂದು ಪ್ರಶ್ನಿಸಿದ ಸಂದರ್ಭ ತಳ್ಳಾಟ-ನೂಕಾಟ ದೊಂದಿಗೆ ಹೊಡೆದಾಟ ನಡೆದಿದ್ದು, ಸಭೆಯಲ್ಲಿ ಭಾರೀ ಗೊಂದಲ ಏರ್ಪಟ್ಟಿತು. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ; ಕೆಲವೊಂದು ಕುರ್ಚಿಗಳು ಪುಡಿಯಾಗಿವೆ. ಇತ್ತ ಪಕ್ಷದ ನಗರಾಧ್ಯಕ್ಷ ಸೋಮೇಶ್ ಅವರ ಮೇಲೂ ಆಕ್ರೋಶ ವ್ಯಕ್ತವಾಗಿತ್ತು. ಮುಖಂಡರುಗಳೇ ಹೊಡೆದಾಡಿ ಕೊಂಡಿದ್ದಾರೆ ಎಂದು ಸಭೆಯಲ್ಲಿದ್ದ ಹಿರಿಯ ಕಾರ್ಯಕರ್ತರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಕಾರ್ಯಕರ್ತರು ಅಸಮಾಧಾನಗಳನ್ನು ಬದಿಗಿಟ್ಟು ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು. ಚುನಾವಣೆಯಲ್ಲಿ ಸೋಲಿಗೆ ಹಲವು ಕಾರಣಗಳಿವೆ. ಪಕ್ಷ ಸಂಘಟನೆಯ ಬಗ್ಗೆ ಮುಖಂಡರುಗಳು ಕಾರ್ಯಕರ್ತರಿಗೆ ಆರ್ಡರ್ ಮಾಡಬಾರದು. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಜಿಲ್ಲಾ ಬಿಜೆಪಿ ಮಾಜೀ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಈ ಬಾರಿಯ ಚುನಾವಣೆಯನ್ನು ಸಂಘಟಿತರಾಗಿ ಎದುರಿಸಿದ್ದೇವೆ. ಕಾರ್ಯಕರ್ತರು ಹೆಚ್ಚು ಶ್ರಮ ಪಟ್ಟಿದ್ದಾರೆ. ಆದರೂ ಕಡಿಮೆ ಅಂತರದಿAದ ಸೋಲಾಗಿದೆ. ಒಂದು ವೇಳೆ ತನಗೆ ಅಥವಾ ರಾಬಿನ್ ಅವರಿಗೆ ಟಿಕೇಟ್ ಸಿಕ್ಕಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯತ್ತ ಗಮನ ಹರಿಸೋಣ ಎಂದಿದ್ದಾರೆ.
ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ತಾನು ವೀರಾಜಪೇಟೆ ಯವನಾಗಿದ್ದರೂ ಮಡಿಕೇರಿ ಕ್ಷೇತ್ರದಲ್ಲಿ ಪಕ್ಷದ ಕೆಲಸವನ್ನು ಹೆಚ್ಚು ಮಾಡಿದ್ದೇನೆ. ಆದರೂ ಚುನಾವಣೆಯಲ್ಲಿ ಸೋಲಾಗಿದೆ. ಮುಂದೆ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ಇನ್ನಷ್ಟು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು ಎನ್ನಲಾಗಿದೆ.
ಗಲಾಟೆ ನಡೆದ ನಂತರವೂ ಒಂದು ಗಂಟೆ ಜರುಗಿದ ಸಭೆಯಲ್ಲಿ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜೀ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರಾದ ವಿ.ಕೆ. ಲೋಕೇಶ್, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಮಚ್ಚಂಡ ಪ್ರಕಾಶ್, ರೂಪಾ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.