ಕೂಡಿಗೆ, ಮೇ ೨೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡೆಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯದ ವಾರ್ಷಿಕ ಪೂಜ್ಯೋತ್ಸವದ ಅಂಗವಾಗಿ ಶನೈಶ್ಚರ ಜಯಂತಿಯ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು.

ಶನೈಶ್ಚರ ಸ್ವಾಮಿ ದೇವಾಲಯ ಆವರಣದಲ್ಲಿ ವಿವಿಧ ಹೋಮ ಹವನಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಶನೈಶ್ಚರ ಸ್ವಾಮಿಯ ವಿಗ್ರಹವನ್ನು ಸಣ್ಣ ರಥದಲ್ಲಿ ಕುಳ್ಳಿರಿಸಿ, ಪೂಜೆ ಸಲ್ಲಿಸಿ, ನಂತರ ರಥವನ್ನು ಆಶ್ರಮಗೇಟ್‌ವರೆಗೆ ಭಕ್ತರ ಜಯ ಘೋಷದೊಂದಿಗೆ ಎಳೆದುಕೊಂಡು ಹೋಗಿ ನಂತರ ಸ್ವಸ್ಥಾನಕ್ಕೆ ಬರಲಾಯಿತು. ಪೂಜಾ ಕೈಂಕರ್ಯಗಳನ್ನು ಉಜಿರೆಯ ರಾಮಚಂದ್ರ ಭಟ್ಟರು ನೆರವೇರಿಸಿದರು.

ನಂತರ ಸ್ವಾಮಿ ವಿಗ್ರಹಕ್ಕೆ ಹಾರಂಗಿ ನದಿಯಲ್ಲಿ ಜಳಕ, ವೈಭವದ ಮೆರವಣಿಗೆ, ರಂಗ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣಾ ಕಾರ್ಯಕ್ರಮಗಳು ನಡೆದವು. ಈ ಜಯಂತಿ ಕಾರ್ಯಕ್ರಮದಲ್ಲಿ ಕೂಡಿಗೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದರು.