*ಗೋಣಿಕೊಪ್ಪ, ಮೇ ೨೩: ಗೋಣಿಕೊಪ್ಪಲು ದಸರಾ ಮೈದಾನದಲ್ಲಿ ನಡೆದ ಗೋಣಿಕೊಪ್ಪ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಕಪ್ (ಉಅಐ) ಪಂದ್ಯಾವಳಿಯ ಅಂತಿಮ ಪಂದ್ಯಾಟದಲ್ಲಿ ಕಾವೇರಿ ಕ್ರಿಕೆಟರ್ಸ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿತು.
ಭಗವತಿ ಕ್ರಿಕೆಟರ್ಸ್ ರನ್ನರ್ ಅಪ್ ಸ್ಥಾನ ಪಡೆದು ತೃಪ್ತಿಪಟ್ಟಿತು. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾವೇರಿ ಕ್ರಿಕೆಟರ್ಸ್ ತಂಡವು ೫ ವಿಕೆಟ್ ನಷ್ಟಕ್ಕೆ ೩೮ರನ್ ಗಳಿಸಿ ಭಗವತಿ ಕ್ರಿಕೆಟರ್ಸ್ ತಂಡಕ್ಕೆ ೩೯ ರನ್ಗಳ ಗುರಿ ನೀಡಿತು. ಗುರಿಯನ್ನು ಬೆನ್ನಟ್ಟಿದ ಭಗವತಿ ಕ್ರಿಕೆಟರ್ಸ್ ತಂಡ ನಾಲ್ಕು ಓವರ್ ಗಳಿಗೆ ೩ ವಿಕೆಟ್ ನಷ್ಟಕ್ಕೆ ೨೬ರನ್ಗಳನ್ನು ಗಳಿಸಿ ೧೩ ರನ್ಗಳ ಸೋಲನ್ನು ಅನುಭವಿಸಿ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಬಿವೈಸಿ ಕಾಕೂರು ತಂಡ ಮತ್ತು ಚಾಣಕ್ಯ ಬಿಟ್ಟಂಗಾಲ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬಿವೈಸಿ ಕಾಕೂರು ತಂಡವನ್ನು ಸೋಲಿಸಿ ಮೂರನೇ ಸ್ಥಾನವನ್ನು ಬಿವೈಸಿ ಕಾಕೂರು ತಂಡವು ಪಡೆದುಕೊಂಡಿತು.
ಚಾಣಕ್ಯ ಬಿಟ್ಟಂಗಾಲ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತು. ಮೇ ೧೮ರಿಂದ ಪ್ರಾರಂಭವಾದ ಗೋಣಿಕೊಪ್ಪಲು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೬ ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಪಂದ್ಯಾಟವನ್ನು ನಾಲ್ಕು ಓವರ್ಗಳಿಗೆ ಸೀಮಿತವಾಗಿತ್ತು.
ಮುಖ್ಯ ಅತಿಥಿಗಳಾಗಿ ಉತ್ತಿಷ್ಟ ಚಾರಿಟೇಬಲ್ ಸೇವಾ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷೆ ಸುಜಾತ. ಎಂ, ಗೋಣಿಕೊಪ್ಪ ಕಾಂಗ್ರೆಸ್ ಮುಖಂಡ ಕುಲ್ಲಚಂಡ ಪ್ರಮೋದ್ ಗಣಪತಿ, ರಾಯಲ್ ಫಿಶ್ ಮಾಲೀಕ ಉಂಬೈ, ಪ್ರಮುಖರುಗಳಾದ ಕವಿ ಸುಬ್ಬಯ್ಯ, ಮನು, ಗಗನ್, ಮುಕ್ತರ್ ಬಾಯ್, ಫ್ರೆಂಡ್ಸ್ ಆಟೋ ಸ್ಪೇರ್ಸ್ ಮಾಲೀಕರದ ಟಿ.ಕೆ. ಗಂಗಾಧರನ್ ಹಾಗೂ ಕ್ರಿಕೆಟ್ ಸಮಿತಿಯ ಅಧ್ಯಕ್ಷ ವೇಣುಗೋಪಾಲ್ ಪಾಲ್ಗೊಂಡಿದ್ದರು.