ಕಣಿವೆ, ಮೇ ೨೨: ಕಳೆದ ಹದಿನೈದು ದಿನಗಳ ಹಿಂದಷ್ಟೇ ಮಳೆಯನ್ನು ಸುರಿಸದ ವರುಣನನ್ನು ಶಪಿಸಿ ಮೂದಲಿಸುತ್ತಿದ್ದ ಕೃಷಿಕರು, ಇದೀಗ ಮುದದಿಂದ ಮಳೆ ಸುರಿಸಿದ ವರುಣನಿಗೆ ನಮಿಸಿ ಜೋಳದ ಬಿತ್ತನೆಗೆ ಮುಂದಾಗಿದ್ದಾರೆ.

ಕುಶಾಲನಗರ ತಾಲೂಕಿನ ಕಣಿವೆ, ಭುವನಗಿರಿ, ಮದಲಾಪುರ, ಅತ್ತೂರು, ಯಡವನಾಡು, ತೊರೆನೂರು, ಭೈರಪ್ಪನಗುಡಿ ಮೊದಲಾದ ಗ್ರಾಮಗಳ ಕೃಷಿಕರು ಈಗಾಗಲೇ ಕೈಗೊಂಡಿರುವ ಶುಂಠಿ, ಕೆಸ, ಸಿಹಿ ಗೆಣಸು ಮೊದಲಾದ ಬೆಳೆಗಳಿಗೆ ಈಗ ಸುರಿದ ಮಳೆ ಬಹಳಷ್ಟು ಉಪಯುಕ್ತವಾಗಿದ್ದನ್ನು ಕಂಡು ಹೆಚ್ವಿನ ಖುಷಿಯಿಂದ ಇದೀಗ ಅಲ್ಪಾವಧಿ ಬೆಳೆ ಮುಸುಕಿನ ಜೋಳದ ಬಿತ್ತನೆಗೆ ಮುಂದಾಗಿರುವುದು ಕಂಡು ಬರುತ್ತಿದೆ.

ಜೋಳದ ಬಿತ್ತನೆ ಮಾಡಲು ಜೋಡಿ ಎತ್ತುಗಳ ನೇಗಿಲು ಉಳುಮೆಗೆ ದಿನಕ್ಕೆ ೧೫೦೦ ರೂಗಳನ್ನು ವ್ಯಯಿಸಿ ಹೊಲದಲ್ಲಿ ನೆಟ್ಟನೆಯ ಸಾಲುಗಳನ್ನು ಬಿಡುವ ಮೂಲಕ ಅದರಲ್ಲಿ ಕೂಲಿ ಕಾರ್ಮಿಕ ಮಹಿಳೆಯರ ನೆರವಿನಿಂದ ಜೋಳದ ಬಿತ್ತನೆಗೆ ತೊಡಗಿಸಿಕೊಂಡಿದ್ದಾರೆ.

ಮುAದುವರೆದ ರಾಷ್ಟç ಜಪಾನ್ ದೇಶದಲ್ಲಿ ಅಲ್ಲಿನ ರೈತರು ಜೋಳ ಬಿತ್ತನೆಗೆ ಯಂತ್ರಗಳ ಬಳಕೆ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಜೋಳದ ಕಟಾವಿಗೆ ಯಂತ್ರಗಳ ಮೊರೆ ಹೋಗುತ್ತರಾದರೂ ಬಿತ್ತನೆಗೆ ಯಂತ್ರಗಳ ಮೊರೆ ಹೋಗುತ್ತಿಲ್ಲ. ಅಂದರೆ ಇನ್ನೂ ಕೂಡ ಬೀಜ ಬಿತ್ತನೆಗಳ ಯಂತ್ರಗಳ ಪೂರೈಕೆ ಅಥವಾ ಆ ಬಗೆಗಿನ ತಂತ್ರಜ್ಞಾನ ಕೃಷಿಕರಿಗೆ ಸಿಗದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಭುವನಗಿರಿ ಗ್ರಾಮದ ಪ್ರಗತಿಪರ ಕೃಷಿಕ ಟಿ.ಕೆ.ಚಂದ್ರಶೇಖರ್ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಕಾಂತರಾಜು ಹಾಗೂ ಟಿ.ಕೆ. ವಿಶ್ವನಾಥ್.

ಬೀಜ ಬಿತ್ತನೆಗೈದ ಕೇವಲ ಮೂರುವರೆ ತಿಂಗಳಲ್ಲಿ ಕಟಾವಿಗೆ ಬರುವ ಮುಸುಕಿನ ಜೋಳದ ಬಿತ್ತನೆಯಲ್ಲಿ ಎಲ್ಲೆಡೆಯ ಕೃಷಿಕರು ತೊಡಗಿಕೊಂಡಿದ್ದಾರೆ.

ವರದಿ : ಕೆ.ಎಸ್.ಮೂರ್ತಿ