ಸುಂಟಿಕೊಪ್ಪ, ಮೇ ೨೨: ಗರಗಂದೂರು ಗ್ರಾಮದ ಚಿನ್ನಳ್ಳಿ ತೋಟದಲ್ಲಿ ಮರ ಕಡಿಯುವ ಸಂದರ್ಭ ಮರದಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಬಸವನಹಳ್ಳಿಯ ದಿಡ್ಡಳ್ಳಿ ನಿವಾಸಿ ಗಣೇಶ (೩೧) ಎಂಬಾತ ಇತರ ಕಾರ್ಮಿಕರೊಂದಿಗೆ ಚಿನ್ನಳ್ಳಿ ತೋಟದಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದು, ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗಣೇಶ ಮೃತಪಟ್ಟಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ಗಣೇಶ ವಿವಾಹವಾಗಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಕೊಡಗು ಜಿಲ್ಲಾ ಕಾರ್ಮಿಕ ಮತ್ತು ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಅಣ್ಣಾ ಶರೀಫ್ ತೋಟದ ಮಾಲೀಕರು ಮರಣ ಹೊಂದಿರುವ ಕಾರ್ಮಿಕನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಪರಿಹಾರ ನೀಡಿದ ನಂತರವಷ್ಟೇ ಗಣೇಶನ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ ಮೃತನ ಕುಟುಂಬಸ್ಥರು ಹೇಳಿದ್ದಾರೆ.