ಸೋಮವಾರಪೇಟೆ, ಮೇ ೨೨: ಮನೆಯ ಹಿಂಭಾಗದ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಅರಣ್ಯ ಇಲಾಖಾ ಹಂಗಾಮಿ ನೌಕರನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗೌಡಳ್ಳಿ ಸಮೀಪದ ಚನ್ನಾಪುರ ಗ್ರಾಮದ ಮೋಹನ ಮತ್ತು ವನಜಾಕ್ಷಿ ದಂಪತಿಯ ಪುತ್ರ ವಂಶಿ (೨೫) ಎಂಬಾತನೇ ಆತ್ಮಹತ್ಯೆಗೆ ಶರಣಾದವನು.
ಪುಷ್ಪಗಿರಿ ವನ್ಯಜೀವಿ ವಿಭಾಗದಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡುತ್ತಿದ್ದ ವಂಶಿ, ನಿನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ಮನೆಯ ಹಿಂಬದಿ ಇರುವ ತೋಟಕ್ಕೆ ತೆರಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಕಳೆದ ೫ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಹಂಗಾಮಿ ನೌಕರನಾಗಿದ್ದ ವಂಶಿ, ಪುಷ್ಪಗಿರಿ ವನ್ಯಜೀವಿ ವ್ಯಾಪ್ತಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಭಾಗಮಂಡಲ ವ್ಯಾಪ್ತಿಗೆ ತೆರಳಿದ್ದ. ನಿನ್ನೆ ರಾತ್ರಿ ಮನೆಯಿಂದ ಹೊರ ಹೋದವನು ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.