ಮಡಿಕೇರಿ, ಮೇ ೨೨: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಟಿ೧೦ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಮೂರನೇ ದಿನದ ಪಂದ್ಯಾಟದಲ್ಲಿ ಎಂಸಿಬಿ, ಟೀಮ್ ಭಗವತಿ,ಎಲೀಟ್ ಕ್ರಿಕೆಟರ್ಸ್ ತಂಡಗಳು ಜಯಗಳಿಸಿದವು.ಮೊದಲ ಪಂದ್ಯದಲ್ಲಿ ಎಂಸಿಬಿ ತಂಡ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಕೆಜಿಎಸ್ ನಿಗದಿತ ೧೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೯೨ ರನ್ ಗಳನ್ನು ಗಳಿಸಿತು. ಐಕಾನ್ ಆಟಗಾರ ನಯನ್ ಚೆರಿಯಮನೆ ವೈಯಕ್ತಿಕ ೩೨ (೧೮ ಬಾಲ್) ರನ್ ಗಳಿಸಿದರು. ಎಂಸಿಬಿ ತಂಡದ ಐಕಾನ್ ಆಟಗಾರ ಕೊಂಬಾರನ ಹರ್ಷ ೩ ವಿಕೆಟ್ ಕಬಳಿಸಿದರು.
ನಂತರ ಬ್ಯಾಟ್ ಮಾಡಿದ ಎಂಸಿಬಿ ತಂಡ ೯ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೯೪ ರನ್ ಗಳಿಸಿ ಜಯಗಳಿಸಿತು. ಎಂಸಿಬಿ ಆಟಗಾರ ಕುಶ್ವಂತ್ ಕೋಳಿಬೈಲ್ ೩೭(೧೭) ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಜಯದ ದಡ ಸೇರಿಸಿದರು. ಹರ್ಷ ಕೊಂಬಾರನ ೩ ವಿಕೆಟ್ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಎರಡನೇ ಪಂದ್ಯಾಟ ಕುಕ್ಕನೂರು ಬುಲ್ಸ್ ಹಾಗೂ ಟೀಮ್ ಭಗವತಿ ನಡುವೆ ನಡೆದು
ಟಾಸ್ ಗೆದ್ದ ಕುಕ್ಕುನೂರು ತಂಡ ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡಿತು. ನಿಗದಿತ ೧೦ ಓವರ್ಗಳಲ್ಲಿ ಟೀಮ್ ಭಗವತಿ ೫ ವಿಕೆಟ್ ನಷ್ಟಕ್ಕೆ ೯೪ ರನ್ ಗಳಿಸಿತು. ರಣಜಿ ಆಟಗಾರ ಸುಳ್ಯಕೋಡಿ ರಿಷಿ ಬೋಪಣ್ಣ ೪೪(೨೦) ರನ್ ಗಳಿಸಿದರು. ಕುಕ್ಕುನೂರು ಪರವಾಗಿ ಯಾಲದಾಳು ಯಶಿನ್ ಬೋಪಣ್ಣ ೩ ವಿಕೆಟ್, ಓಂಪ್ರಕಾಶ್ ಉಡುದೋಳಿ ೨ ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಕುಕ್ಕುನೂರು ತಂಡ ೧೦ ಓವರ್ ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೭೭ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಟೀಮ್ ಭಗವತಿ ಕೊನೆಯ ಓವರ್ನಲ್ಲಿ ಕಟ್ಟೆಮನೆ ಜಾಹ್ನವಿ ಸೋನಾರನ್ನು ಕಣಕ್ಕಿಳಿಸಿ ಕೇವಲ ೨ ರನ್ ನೀಡಿ ಒಂದು ವಿಕೆಟ್ ಪಡೆದದ್ದು ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.ಸುಳ್ಯಕೋಡಿ ರಿಷಿ ಬೋಪಣ್ಣ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.ಮೂರನೇ ಪಂದ್ಯಾಟದಲ್ಲಿ ಟಾಸ್ ಗೆದ್ದ ಎಲೀಟ್ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು. ನಿಗದಿತ ೧೦ ಓವರ್ ಗಳಲ್ಲಿ ಬ್ಯಾಟ್ ಮಾಡಿದ ಕೆಜಿಎಸ್ ಎರಡು ವಿಕೆಟ್ ನಷ್ಟಕ್ಕೆ ೭೯ ರನ್ ಗಳಿಸಿತು. ಐಕಾನ್ ಆಟಗಾರ ಚೆರೆಮನೆ ನಯನ್ ೪೧(೨೫) ರನ್ ಗಳಿಸಿದರು.
ನಂತರ ಬ್ಯಾಟ್ ಮಾಡಿದ ಎಲೀಟ್ ತಂಡ ೯.೨ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೮೦ ರನ್ ಬಾರಿಸಿ ಜಯಗಳಿಸಿತು. ಅವಿನ್ ಮಾಲಿ ೩೦(೨೩) ರನ್, ತಳೂರು ವಿಕ್ಕ್ಕಿ ೨೩(೨೩) ರನ್ ಗಳಿಸಿದರು. ಕೆಜಿಎಸ್ ಪರವಾಗಿ ಜನನ್ ಪಾರೆಮಜಲು ೧ ವಿಕೆಟ್ ಪಡೆದರು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಎಲೀಟ್ ತಂಡದ ಲೋಕೇಶ್ ಕೊಡಂಜೆ ಪಡೆದರು.
ಈ ಪೂಲ್ನಲ್ಲಿ ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಮತ್ತು ಕೆಜಿಎಸ್ ಪಂದ್ಯಾಟದಿAದ ನಿರ್ಗಮಿಸಿತು. ಎಲೀಟ್ ತಂಡ ಮತ್ತು ಎಂಸಿಬಿ ತಂಡ ಟೇಬಲ್ ಟಾಪರ್ ಆಗಿ ಹೊರಹೊಮ್ಮಿದವು.