ಮಡಿಕೇರಿ, ಮೇ ೨೨: ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದಿಂದ ಮಾಜಿ ಸೈನಿಕ, ಪ್ರಸ್ತುತ ಮಡಿಕೇರಿಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಿಬ್ಬಂದಿ ಬಿ.ಎ. ಮುತ್ತಪ್ಪ ಗಂಭೀರ ಸ್ಥಿತಿಯಲ್ಲಿದ್ದು, ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕುಶಾಲನಗರ ಸಮೀಪದ ಬಸವನಹಳ್ಳಿಯ ನಿವಾಸಿ ಮುತ್ತಪ್ಪ ಕರ್ತವ್ಯಕ್ಕೆಂದು ತನ್ನ ಆ್ಯಕ್ಟೀವ ಸ್ಕೂಟರ್‌ನಲ್ಲಿ (ಕೆಎ-೧೨-ಎಸ್-೬೭೩೬) ಮಡಿಕೇರಿಗೆ ಬರುವ ಸಂದರ್ಭದಲ್ಲಿ ಇಬ್ಬನಿ ರೆಸಾರ್ಟ್ ಸಮೀಪದ ತಿರುವಿನಲ್ಲಿ ದಿಢೀರ್ ಆಗಿ ಎದುರಿಗೆ ಬಂದ ಸ್ಕೋಡ ಕಾರು (ಕೆಎ-೩೦-ಎಂ-೮೭೯೦) ಡಿಕ್ಕಿಪಡಿಸಿದೆ. ಪರಿಣಾಮ ಸವಾರನ ತಲೆ, ಮರ್ಮಾಂಗ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರವಾಗಿ ಪೆಟ್ಟಾಗಿವೆ. ತಕ್ಷಣ ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್‌ನಲ್ಲಿ ಬೆಂಗಳೂರಿನಿAದ ಮಡಿಕೇರಿಗೆ ಪ್ರವಾಸಕ್ಕೆಂದು ಬಂದು ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.