ಮಡಿಕೇರಿ, ಮೇ ೨೦: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿರುವ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಗೌಡ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಇಂದು ಚಾಲನೆ ದೊರೆಯಿತು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನೆಯನ್ನು ೧೫ ವರ್ಷದೊಳಗಿನ ಕೆಎಸ್‌ಸಿಎ ಆಟಗಾರ್ತಿ ಜೈನೀರ ತನಿಷ್ಕಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿದ್ದ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಮೂಲಕ ಆರಂಭವಾದ ಜನಾಂಗದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಂತರದಲ್ಲಿ ಕೊಡಗು ಗೌಡ ಯುವ ವೇದಿಕೆಯವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಪ್ರಥಮ ಬಾರಿಗೆ ವಿಶೇಷವಾಗಿ ಲೆದರ್‌ಬಾಲ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಸಂತೋಷದ ವಿಚಾರ. ಯಾವುದೇ ಚಟುವಟಿಕೆಯಲ್ಲೂ ಹೊಸತನ, ಬದಲಾವಣೆಗಳ ಅವಶ್ಯಕತೆ ಇದೆ. ಈ ಒಂದು ಪಂದ್ಯಾವಳಿ ಮೂಲಕ ಉತ್ತಮ ಆಟಗಾರರನ್ನು ಸಮಾಜಕ್ಕೆ ಪರಿಚಯಿಸಿದಂತಾಗುತ್ತದೆ ಎಂದು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪೈಕೇರ ಮನೋಹರ್ ಮಾದಪ್ಪ ನೇತೃತ್ವದಲ್ಲಿ ಯುವ ವೇದಿಕೆಯಿಂದ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇದೀಗ ಕೆಲವು ಬದಲಾವಣೆಯೊಂದಿಗೆ ನೂತನ ತಂಡ ರಚನೆಯಾಗಿದ್ದು, ಇನ್ನೂ ಹುರುಪಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಾಂಗದ ಹಿರಿಮೆಯನ್ನು ಎತ್ತಿ ಹಿಡಿಯುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವಂತಾಗಲಿ. ಲೆದರ್‌ಬಾಲ್ ಕ್ರಿಕೆಟ್ ಆಯೋಜನೆ ಮಾಡಿರುವುದು ಜನಾಂಗ ಹಾಗೂ ಜನತೆಗೆ ಉತ್ತೇಜನ ನೀಡುವುದರೊಂದಿಗೆ ಯಶಸ್ವಿಯಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮಾತನಾಡಿ,

(ಮೊದಲ ಪುಟದಿಂದ) ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಿಂದ ಜನಾಂಗ ಬಾಂಧವರಲ್ಲಿ ಪರಸ್ಪರ ಒಗ್ಗಟ್ಟು, ಪರಿಚಯ, ಸಂಬAಧಗಳನ್ನು ಬೆಸೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದೀಗ ಒಂದು ಹೆಜ್ಜೆ ಮುಂದಿರಿಸಿ ಲೆದರ್‌ಬಾಲ್ ಪಂದ್ಯಾವಳಿ ಆಯೋಜನೆ ಮಾಡಿದ್ದೇವೆ. ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಇದ್ದರು. ಕಾರ್ಯದರ್ಶಿ ಪುದಿಯನೆರವನ ರಿಶಿತ್ ನಿರೂಪಿಸಿದರೆ, ಕೋಚನ ಡೀನಾ ಅನೂಪ್ ಸ್ವಾಗತಿಸಿದರು. ಕೆದಂಬಾಡಿ ಕಾಂಚನ ವಂದಿಸಿದರು. ನಂತರ ಮೈದಾನದಲ್ಲಿ ಆಟಗಾರರನ್ನು ಪರಿಚಯಿಸಿಕೊಂಡು ಬ್ಯಾಟ್ ಮಾಡುವುದರ ಮೂಲಕ ಅತಿಥಿಗಳು ಪಂದ್ಯಾವಳಿಗೆ ಚಾಲನೆ ನೀಡಿದರು.