(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಮೇ ೧೯: ಪ್ರಸ್ತುತ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಕಾಂಗ್ರೆಸ್ ಪಕ್ಷ ಈ ಬಾರಿ ಮುನ್ನಡೆ ಪಡೆದುಕೊಂಡಿದೆ. ಕೊಡಗು - ಮೈಸೂರು ಕ್ಷೇತ್ರ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆಯೊಂದಿಗೆ ಮೈಸೂರು ಜಿಲ್ಲೆಗೆ ಒಳಪಡುವ ಹುಣಸೂರು, ಪಿರಿಯಾಪಟ್ಟಣ, ಮೈಸೂರು ನಗರದಲ್ಲಿ ಬರುವ ಚಾಮರಾಜನಗರ, ನರಸಿಂಹರಾಜ, ಚಾಮುಂಡೇಶ್ವರಿ ಹಾಗೂ ಕೃಷ್ಣರಾಜ ಕ್ಷೇತ್ರಗಳನ್ನು ಒಳಗೊಂಡAತೆ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರ ಬರುತ್ತದೆ.

ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಕ್ಷೇತ್ರ, ಜೆ.ಡಿ.ಎಸ್. ಎರಡು ಕ್ಷೇತ್ರ ಹಾಗೂ ಬಿಜೆಪಿ ಒಂದರಲ್ಲಿ ಮಾತ್ರ ಜಯ ಗಳಿಸಿದೆ. ಕೊಡಗಿನ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ. ಮಂತರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣ, ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್‌ನ ಕೆ.ವೆಂಕಟೇಶ್, ಚಾಮರಾಜದಲ್ಲಿ ಕೆ. ಹರೀಶ್ ಗೌಡ ಹಾಗೂ ನರಸಿಂಹರಾಜದಲ್ಲಿ ತನ್ವೀರ್ ಸೇಠ್ ಕಾಂಗ್ರೆಸ್ ಪಕ್ಷದಿಂದ ಜಯ ಸಾಧಿಸಿದವರಾಗಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ ಹಾಗೂ ಹುಣಸೂರಿನಲ್ಲಿ ಜಿ.ಟಿ. ದೇವೇಗೌಡರ ಪುತ್ರರೇ ಆಗಿರುವ ಜೆಡಿಎಸ್‌ನ ಜಿ.ಡಿ. ಹರೀಶ್ ಗೌಡ ಅವರುಗಳು ಶಾಸಕರಾಗಿದ್ದಾರೆ. ಒಟ್ಟು ೮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿಯ ಅಭ್ಯರ್ಥಿ ಶ್ರೀವತ್ಸ ಅವರು ಮಾತ್ರ ಬಿಜೆಪಿ ಪಕ್ಷದಿಂದ ಜಯ ಸಾಧಿಸಿದ್ದಾರೆ. ಇವರು ಕೃಷ್ಣರಾಜದಲ್ಲಿ ಗೆಲುವು ಪಡೆದಿದ್ದಾರೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಶಾಸಕರಾಗಿದ್ದರು.

ಹುಣಸೂರು ಕ್ಷೇತ್ರದಲ್ಲಿ ೨೦೧೮ರ ಚುನಾವಣೆಯಲ್ಲಿ ಅಡಗೂರು ವಿಶ್ವನಾಥ್ ಜೆ.ಡಿ.ಎಸ್.ನಿಂದ ಜಯಗಳಿಸಿದ್ದರು. ಆದರೆ ಅವರು ನಂತರದಲ್ಲಿ ಬಿಜೆಪಿ ಸೇರ್ಪಡೆಗೊಂಡ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್.ಪಿ. ಮಂಜುನಾಥ್ ಜಯಗಳಿಸಿ ಶಾಸಕರಾಗಿದ್ದರು. ಈ ಬಾರಿ ಹುಣಸೂರು ಮತ್ತೆ ಜೆಡಿಎಸ್ ಪಾಲಾಗಿದೆ.

ಪಿರಿಯಾಪಟ್ಟಣದಲ್ಲಿ ಕಳೆದ ಬಾರಿ ಜೆಡಿಎಸ್‌ನ ಕೆ. ಮಹದೇವ್ ಶಾಸಕರಾಗಿದ್ದರು. ಈ ಬಾರಿ ಜೆಡಿಎಸ್ ಈ ಕ್ಷೇತ್ರ ಕಳೆದುಕೊಂಡಿದ್ದು, ಇಲ್ಲಿ ಕಾಂಗ್ರೆಸ್‌ನ ಕೆ. ವೆಂಕಟೇಶ್ ಶಾಸಕರಾಗಿ ಚುನಾಯಿತರಾಗಿದ್ದಾರೆ.

ಮೈಸೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ನರಸಿಂಹರಾಜದಲ್ಲಿ ಕಳೆದ ಬಾರಿ ಹಾಗೂ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ (ತನ್ವೀರ್ ಸೇಠ್) ಆಯ್ಕೆಯಾಗಿದ್ದಾರೆ. ಚಾಮರಾಜದಲ್ಲಿ ಕಳೆದ ಬಾರಿ ಬಿಜೆಪಿಯ ಬಿ. ನಾಗೇಂದ್ರ ಶಾಸಕರಾಗಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರ ಕಳೆದುಕೊಂಡಿದ್ದು, ಇಲ್ಲಿ ಕಾಂಗ್ರೆಸ್‌ನ ಕೆ. ಹರೀಶ್ ಗೌಡ ಚುನಾಯಿತರಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡು ಚುನಾವಣೆಯಲ್ಲೂ ಜೆಡಿಎಸ್ (ಜಿ.ಟಿ. ದೇವೇಗೌಡ) ಆಯ್ಕೆಯಾಗಿದೆ.

ಕೃಷ್ಣರಾಜದಲ್ಲಿ ಮಾತ್ರ ಬಿಜೆಪಿ ಈ ಬಾರಿ ತನ್ನ ಅಧಿಕಾರ ಉಳಿಸಿಕೊಂಡಿದೆ. ಇಲ್ಲಿ ಕಳೆದ ಬಾರಿ ಬಿಜೆಪಿಯ ರಾಮ್‌ದಾಸ್ ಶಾಸಕರಾಗಿದ್ದರೆ, ಈ ಬಾರಿ ಶ್ರೀವತ್ಸ ಚುನಾಯಿತರಾಗಿದ್ದಾರೆ. ಒಟ್ಟಾರೆಯಾಗಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಹಿನ್ನಡೆ ಕಂಡುಬAದಿದೆ. ಕೊಡಗಿನ ಎರಡು ಕ್ಷೇತ್ರ ಹಾಗೂ ಚಾಮರಾಜ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ಈ ಬಾರಿ ಹೆಚ್ಚು ಲಾಭ (ಮಡಿಕೇರಿ, ವೀರಾಜಪೇಟೆ, ಪಿರಿಯಾಪಟ್ಟಣ, ನರಸಿಂಹರಾಜ ಹಾಗೂ ಚಾಮರಾಜ)ವಾದಂತಾಗಿದೆ.

ಜೆಡಿಎಸ್ ಉಪ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಹುಣಸೂರು ಕ್ಷೇತ್ರವನ್ನು ಮರಳಿ ಪಡೆದಿದ್ದರೆ, ಚಾಮುಂಡೇಶ್ವರಿ ಕ್ಷೇತ್ರವನ್ನು ಉಳಿಸಿಕೊಂಡಿದೆ.