ಮಡಿಕೇರಿ, ಮೇ ೧೮ : ಜಿಲ್ಲಾ ಕೇಂದ್ರ ಮಡಿಕೇರಿಗೆ ತಾ. ೧೮ರ ಸಂಜೆ ೪ ಗಂಟೆ ವೇಳೆಯಲ್ಲಿ ದಿಢೀರ್ ಮಳೆ ಸುರಿಯಿತು. ರಭಸದ ಗಾಳಿ - ಸಿಡಿಲು ಸಹಿತವಾಗಿ ಕೆಲ ಹೊತ್ತು ಸುರಿದ ಮಳೆ ತಂಪೆರೆಯಿತು. ಏಕಾಏಕಿ ವಾತಾವರಣದಲ್ಲಿ ಬದಲಾವಣೆಯಾಗಿ ಗಾಳಿಯ ಬಿರುಸು ಕಂಡು ಬಂದಾಗ ಜನರಲ್ಲಿ ತುಸು ಆತಂಕ ಸೃಷ್ಟಿಯಾಗಿತ್ತು. ಆದರೆ ಕೆಲ ಹೊತ್ತು ಮಾತ್ರ ಮಳೆ ಸುರಿದಿದ್ದು ಮತ್ತೆ ವಾತಾವರಣ ಸಹಜ ಸ್ಥಿತಿಗೆ ಮರಳಿತು.

ಶನಿವಾರಸಂತೆ

ಮುಳ್ಳೂರು: ಗುರುವಾರ ಮಧ್ಯಾಹ್ನ ಶನಿವಾರಸಂತೆ ಹೋಬಳಿಯ ವ್ಯಾಪ್ತಿಯ ಆಲೂರುಸಿದ್ದಾಪುರ, ಮಾಲಂಬಿ, ಕಂತೆ ಬಸವನಹಳ್ಳಿ, ಕಣಿವೆ ಬಸವನಹಳ್ಳಿ, ಮುಳ್ಳೂರು, ನಿಡ್ತ, ಗೋಪಾಲಪುರ, ಗೌಡಳ್ಳಿ, ಬೀಟೆಕಟ್ಟೆ, ಹಿರಿಕರ ಮುಂತಾದ ಕಡೆಗಳಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಿದೆ.

ಸುಂಟಿಕೊಪ್ಪ : ಸುಂಟಿಕೊಪ್ಪ ಸುತ್ತ ಮುತ್ತಲಿನ ಗ್ರಾಮಗಳಾದ ಕೊಡಗರಹಳ್ಳಿ. ನಾಕೂರು. ಎಮ್ಮೆಗುಂಡಿ, ಪನ್ಯ. ಬೆಟ್ಟಗೇರಿ, ಗದ್ದೆಹಳ್ಳ. ಕಂಬಿ ಬಾಣೆ, ಗ್ರಾಮಗಳಲ್ಲಿ ಮಳೆಯಾಗಿದೆ. ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ನಿರ್ಮಿಸಲಾದ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲಾಗದೆ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಗಾಳಿ ಮಳೆಯಿಂದಾಗಿ ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿ ಸಂಜೆ ವೇಳೆ ಪರದಾಡುವಂತಾಯಿತು.