ಶನಿವಾರಸAತೆ, ಮೇ ೧೯ :ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಗ್ರಾಮದೇವತೆ ಶ್ರೀಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀವೀರಭದ್ರೇಶ್ವರ ದೇವಾಲಯ ಸಮಿತಿ ವತಿಯಿಂದ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕೆಂಡೋತ್ಸವ ತಾ. ೨೧ ರಿಂದ ೨೨ ರಂದು ನಡೆಯಲಿದೆ.
ತಾ. ೨೧ ರಂದು ಪುಣ್ಯಾಹ, ಪಂಚಗವ್ಯ, ಗಣಪತಿ ಪೂಜೆ, ಮಹಾಸಂಕಲ್ಪ, ಕಂಕಣಧಾರಣ, ಆದಿತ್ಯಾದಿ ನವಗ್ರಹ ಸಹಿತ ಪರಿವಾರ ದೇವತೆಗಳ ಕಳಶ ಸ್ಥಾಪನೆ, ನಂತರ ದೇವರ ವಿಗ್ರಹಕ್ಕೆ ಜಲಾಧಿವಾಸ, ಕ್ಷೀರಾಧಿವಾಸ, ನೇತ್ರಬಿಂಬ ಶುದ್ಧಿ, ಜೀವಕಳೆ, ತೈಲವಾಸ, ಪುಷ್ಪವಾಸ, ಸುವರ್ಣ ವಾಸ, ಧ್ಯಾನಾಧಿವಾಸ, ವಾಸ್ತು ರಾಠೋಡ್ ಹೋಮ, ತತ್ವ ಹೋಮಗಳಿಂದ ಪೂರ್ಣಾಹುತಿ, ವಾಸ್ತುಬಲಿ, ಮಹಾಮಂಗಳಾರತಿ ನಡೆಯಲಿದೆ.
ತಾ. ೨೨ ರಂದು ಬೆಳಿಗ್ಗೆ ೬ ಗಂಟೆಯಿAದ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ನೇತ್ರಮಿಲನ, ಅಲಂಕಾರ, ನಂತರ ಗಣಪತಿಹೋಮ, ನವಗ್ರಹ ಹೋಮ, ಪ್ರಧಾನ ದುರ್ಗಾ ಹೋಮ, ಪೂರ್ಣಾಹುತಿ ತದನಂತರ ಬಲಿಪ್ರದಾನ, ಮಹಾಮಂಗಳಾರತಿ ನೆರವೇರಲಿದೆ. ಅಂದು ರಾತ್ರಿ ೧೦ ಗಂಟೆಗೆ ಹೇಮಾವತಿ ನದಿಗೆ ತೆರಳಿ ನೂತನ ವಿಗ್ರಹದ ಪೂಜೆ ಮಾಡಿ, ಪೂರ್ಣಕುಂಭ ಕಳಶ ಸಹಿತ ದೇವಸ್ಥಾನ ತಲುಪಲಿದೆ.ಮಂಗಳವಾರ ಬೆಳಿಗ್ಗೆ ೫ ಗಂಟೆಗೆ ಕೆಂಡೋತ್ಸವ ಏರ್ಪಡಿಸಲಾಗಿದೆ.ಈ ಎಲಾ ಪೂಜಾ ಕೈಂಕರ್ಯಗಳು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲುಮಠಾಧೀಶ ಮಹಾಂತ ಸ್ವಾಮೀಜಿ ಹಾಗೂ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪ್ರಧಾನ ಅರ್ಚಕ ಮಣಿಕಂಠ ಹಾಗೂ ಅರ್ಚಕ ಚಂದ್ರಯ್ಯ ಅವರಿಂದ ನೇರವೇರಲಿದೆ. ಪೂಜಾ ದಿನಗಳಂದು ನಿರಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.