*ಗೋಣಿಕೊಪ್ಪ, ಮೇ ೧೯: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ತಾ. ೨೦ ಹಾಗೂ ೨೧ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ಹಾಗೂ ಕಾರ್ಯದರ್ಶಿ ಮೂಕಳೇರ ರಮೇಶ್ ಮಾತನಾಡಿ ವಾರದ ಹಿಂದೆ ಶನಿವಾರ ಸಂಜೆ ಊರಿನ ಅಂಬಲದಲ್ಲಿ ದೇವ ಕಟ್ಟ್ ಬೀಳುವ ಮೂಲಕ ಊರಿನಲ್ಲಿ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗಿದ್ದು. ತಾ. ೨೦ ಹಾಗೂ ೨೧ರಂದು ಶ್ರೀ ಗುಂಡಿಯತ್ ಅಯ್ಯಪ್ಪ ಹಾಗೂ ಶ್ರೀ ಭದ್ರಕಾಳಿ ದೇವರ ವಾರ್ಷಿಕ ಬೇಡು ಹಬ್ಬವನ್ನು ವಿಜೃಂಭಣೆಯಿAದ ಆಚರಿಸ ಲಾಗುವುದು. ತಾ. ೨೦ರಂದು ಶನಿವಾರ ಅಪರಾಹ್ನ ೨ ರಿಂದ ೨.೩೦ಗಂಟೆಗೆ ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ಬಲ್ಯಮನೆಯಿಂದ ಪೊಲವಂದೆರೆ ಹೊರಡುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದ್ದಾರೆ.