ಸಿದಾಪುರ, ಮೇ ೧೮: ಸಿದ್ದಾಪುರ ಪಟ್ಟಣದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಸಿದ್ದಾಪುರ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿ.ಪಂ ಮಾಜಿ ಸದಸ್ಯ ಎಂ.ಎಸ್ ವೆಂಕಟೇಶ್ ಮಾತನಾಡಿ, ಗ್ರಾ.ಪಂ ಆಡಳಿತ ಮಂಡಳಿಯು ಕಳೆದ ಎರಡು ವರ್ಷಗಳಿಂದ ಕಸ ವಿಲೇವಾರಿಗೆ ಜಾಗ ಗುರುತಿಸುವುದಾಗಿ ಭರವಸೆ ನೀಡಿದ್ದರೂ ಕೂಡ ಈವರೆಗೂ ಈಡೇರಿಸಲಿಲ್ಲ. ಪಂಚಾಯಿತಿಯು ಕಸ ವಿಲೇವಾರಿಯ ಬಗ್ಗೆ ನಿರ್ಲಕ್ಷö್ಯ ವಹಿಸುತ್ತಿರುವುದು ಖಂಡನೀಯ ಎಂದರು.
ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪ ಮಾತನಾಡಿ, ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಶಾಲೆಗಳ ಹಾಗೂ ಮಸೀದಿ ಮಂದಿರಗಳ ಬಳಿ ಕಸದ ರಾಶಿಯನ್ನು ಹಾಕಲಾಗುತ್ತಿದ್ದು, ದುರ್ನಾತದಿಂದ ಸಾರ್ವಜನಿಕರು ಒಡಾಡಲು ಸಮಸ್ಯೆಯಾಗಿದೆ ಎಂದರು.
ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷ ಪಿ.ಆರ್ ಭರತ್ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾ.ಪಂ ಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಿದ್ದರೂ ಕೂಡ ಸಿದ್ದಾಪುರ ಗ್ರಾ.ಪಂ ಈ ಬಗ್ಗೆ ಆಸಕ್ತಿ ವಹಿಸದೇ ಕಾಲಹರಣ ಮಾಡುತ್ತಿದೆ ಎಂದು ದೂರಿದರು. ಬಳಿಕ ಸ್ಥಳಕ್ಕಾಗಮಿಸಿದ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಗ್ರಾ.ಪಂ ಮಾಜಿ ಅಧ್ಯಕ್ಷ ವಿ.ಕೆ ಬಷೀರ್, ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಹೆಚ್.ಬಿ ರಮೇಶ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ಎಂ.ಹೆಚ್ ಮೂಸ, ಅನಿಲ್, ಎಂ.ಎ ನವೀದ್, ಟಿ.ಟಿ ಉದಯ ಕುಮಾರ್, ಎಸ್.ಬಿ ಪ್ರತೀಶ್, ಉಮ್ಮರ್ ಹಾಜಿ, ರವಿ ಸೇರಿದಂತೆ ಇನ್ನಿತರರು ಇದ್ದರು.