ಮಡಿಕೇರಿ, ಮೇ ೧೯ : ಕೊಡಗು ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಆಗಿರುವ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆಗೆ ಮುಂದಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.

ಅವೈಜ್ಞಾನಿಕ ಕಾಮಗಾರಿ, ಅಕ್ರಮಗಳ ಬಗ್ಗೆ ಕಾಂಗ್ರೆಸ್ ಜನತೆಯ ಮುಂದಿಡುತ್ತಾ ಬಂದಿದೆ. ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಆಗಿದೆ. ಮುಂದೆ ನಾವು ಅದಕ್ಕೆ ಜನರಿಗೆ ಉತ್ತರಿಸಬೇಕಾಗುತ್ತದೆ. ಹೀಗಾಗಿ ತನಿಖೆಗೆ ಒಳಪಡಿಸಲಿದ್ದೇವೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಅಕ್ರಮಗಳಿಗೆ ಅವಕಾಶವಿರುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ಹಂಚಿಕೊAಡರು.

ಈ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಕೊಡಗು ಜಿಲ್ಲೆಯಲ್ಲಿ ಉತ್ತಮ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿತ್ತು. ಎಲ್ಲರು ಸಂಘಟಿತವಾಗಿ ಗೆಲುವಿಗೆ ಶ್ರಮಿಸಿದ್ದೇವೆ. ಇದು ಎಲ್ಲರ ಗೆಲುವು. ಕೊಡಗಿನ ಜನ ಪರಿವರ್ತನೆ ಬಯಸಿ ಕಾಂಗ್ರೆಸ್ ಬೆಂಬಲ ನೀಡಿದ್ದಾರೆ. ನಾವು ಎರಡು ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದೆವು. ಅವುಗಳನ್ನು ಈಡೇರಿಸಲಿದ್ದೇವೆ ಎಂದರು.

ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ. ಮುಂದಿನ ೫ ವರ್ಷದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುವುದು ಶತಸಿದ್ಧ. ಗೋಣಿಕೊಪ್ಪದಲ್ಲಿ ಹೈಟೆಕ್ ಬಸ್ ನಿಲ್ದಾಣ, ವ್ಯಾಪಾರ ಮಳಿಗೆ ನಿರ್ಮಾಣ ಮಾಡುತ್ತೇವೆ. ಭಾಗಮಂಡಲ ಮೇಲ್ಸೇತುವೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುತ್ತೇವೆ ಎಂದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಹಲವರು ಆಕಾಂಕ್ಷಿಗಳಿದ್ದಾರೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಮುಂದಿನ ದಿನದಲ್ಲಿ ಅವಕಾಶಗಳು ಸಿಗಲಿದೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಜಿಲ್ಲಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಪಕ್ಷ ಬಹಳ ಹಿನ್ನಡೆಯಲ್ಲಿತ್ತು. ಎರಡು ವರ್ಷದ ಸಂಘಟನಾತ್ಮಕ ಚಟುವಟಿಕೆಯಲ್ಲಿ ಧ್ರುವ ನಾರಾಯಣ ಅವರ ಸಹಕಾರ, ಪಾತ್ರ ಬಹಳ ದೊಡ್ಡದಿತ್ತು. ಅನೇಕ ಮಂದಿ ಸಹಕರಿಸಿದ್ದಾರೆ. ಎಲ್ಲರ ಸಹಕಾರದಿಂದ ಇಂದು ಯಶಸ್ಸು ಸಿಕ್ಕಿದೆ ಎಂದರು. ಪಕ್ಷದ ಪ್ರಮುಖರಾದ ಟಿ.ಪಿ. ರಮೇಶ್, ಕೊಲ್ಯದ ಗಿರೀಶ್, ರಾಜೇಶ್ ಯಲ್ಲಪ್ಪ, ಸಲಾಂ, ಟಾಟು ಮೊಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.