ಮಡಿಕೇರಿ, ಮೇ ೧೭: ರಾಜ್ಯ ವಿಧಾನಸಭೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್‌ನಲ್ಲಿ ಇದೀಗ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿ ವರಿಷ್ಠರ ಮುಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದು, ಇಬ್ಬರು ಪಟ್ಟು ಸಡಿಲಿಸದೆ ಪಟ್ಟಕ್ಕಾಗಿ ಬಿಗಿಪಟ್ಟುಹಿಡಿದಿದ್ದಾರೆ. ಹೈಕಮಾಂಡ್‌ನ ಹಲವು ಸೂತ್ರಗಳಿಗೂ ಇಬ್ಬರು ಒಪ್ಪಿಲ್ಲ. ಇದರಿಂದ ಹೈಕಮಾಂಡ್ ಗೊಂದಲಕ್ಕೆ ಒಳಗಾಗಿದೆ.

ಸಿದ್ದು ಸಿಎಂ ವದಂತಿ

ಮಧ್ಯಾಹ್ನದ ಹೊತ್ತಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಈ ಕುರಿತು ಅಧಿಕೃತ ಘೋಷಣೆ ಬಾಕಿ ಉಳಿದಿದೆ ಎಂದು ವದಂತಿಗಳು ಹರಿದಾಡಿದವು. ಇದಕ್ಕೆ ಪೂರಕವಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರದ ಸಿದ್ಧತೆಯೂ ನಡೆಯುತಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಕೂಡ ಹೇಳಲಾಗುತಿತ್ತು. ಸಿದ್ದರಾಮಯ್ಯ ಅವರ ಹುಟ್ಟೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆಯೂ ವರದಿಯಾಗಿತ್ತು. ಇದಾದ ಬಳಿಕ ನವದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಡಿಕೆಶಿಯನ್ನು ಮುಖ್ಯಮಂತ್ರಿ ಮಾಡುವಂತೆ ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.

ಘೋಷಣೆಯಾಗಿಲ್ಲ - ಸುರ್ಜೆವಾಲ

ಆದರೆ, ಕೊನೆಗಳಿಗೆಯಲ್ಲಿ ಕರ್ನಾಟಕ ಸಿಎಂ ಆಯ್ಕೆ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ೪೮ರಿಂದ ೭೨ ಗಂಟೆಯೊಳಗೆ

ಕಗ್ಗಂಟಾದ ಮುಖ್ಯಮಂತ್ರಿ ಆಯ್ಕೆ

(ಮೊದಲ ಪುಟದಿಂದ) ಅಧಿಕೃತ ಘೋಷಣೆ ಹೊರಡಿಸುತ್ತೇವೆ ಎಂದು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿ ತಿರುವು ನೀಡಿದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಯಾವುದೇ ಅಂತಿಮವಾಗಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ನಾಳೆ ಅಥವಾ ನಾಡಿದ್ದು ನೂತನ ಸಿಎಂ ಘೋಷಣೆ ಸಾಧ್ಯತೆ ಇದೆ ಎಂದು ಹೇಳಿದರು.

ಖರ್ಗೆ ಸಿಎಂ ಆಗಲಿ

ಸಿದ್ದರಾಮಯ್ಯ ಬೇಡ, ನನ್ನನ್ನು ಸಿಎಂ ಮಾಡಿ ಇಲ್ಲವೇ ನೀವೇ ಸಿಎಂ ಆಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.

ಇಂದು ನವದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸುದೀರ್ಘ ಮಾತುಕತೆ ನಡೆಸಿದ ಡಿಕೆ ಶಿವಕುಮಾರ್ ಯಾರ ಮನವೊಲಿಕೆಗೂ ಜಗ್ಗುತ್ತಿಲ್ಲ. ಹೈಕಮಾಂಡ್‌ನ ೫೦:೫೦ ಫಾರ್ಮುಲಾ, ಡಿಸಿಎಂ ಹುದ್ದೆ, ಅಲ್ಲದೆ ಯಾವುದೇ ಪ್ರಮುಖ ಖಾತೆಗಳು ನನಗೆ ಬೇಡ ಮಾಡುವುದಾದರೆ ಸಿಎಂ ಮಾಡಿ ಎಂದು ಆಗ್ರಹಿಸಿದ್ದಾರೆ.