ಕಣಿವೆ, ಮೇ ೧೭: ಕಾವೇರಿ ನದಿ ತೀರ ನಂಜರಾಯಪಟ್ಟಣ ಗ್ರಾಮದ ಗ್ರಾಮದೈವ ಶ್ರೀ ನಂಜುAಡೇಶ್ವರ, ಶ್ರೀ ಬಸವೇಶ್ವರ, ಶ್ರೀ ಕನ್ನಂಬಾಡಮ್ಮ, ಆದಿಶಕ್ತಿ ದೇವೀರಮ್ಮ ಹಾಗು ಶ್ರೀ ವೀರಭದ್ರಸ್ವಾಮಿ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು. ಬೆಳಿಗ್ಗೆ ದೇವಾಲಯದಲ್ಲಿನ ದೇವತಾ ಮೂರ್ತಿಗಳಿಗೆ ಪವಿತ್ರ ಗಂಗಾ ಅಭಿಷೇಕ ನೆರವೇರಿಸಿದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸಿ ಮಹಾ ಮಂಗಳಾರತಿ ನೆರವೇರಿಸ ಲಾಯಿತು. ಇದಕ್ಕೂ ಮುನ್ನ ಕಾವೇರಿ ನದಿಯಿಂದ ದೇವತಾ ಮೂರ್ತಿಗಳನ್ನು ಮಂಟಪದಲ್ಲಿ ಪೂಜಿಸಿ ಮೆರವಣಿಗೆಯಲ್ಲಿ ದೇವಾಲಯದ ಸನ್ನಿಧಿಗೆ ತರಲಾಯಿತು. ಈ ಸಂದರ್ಭ ಶ್ರೀ ವೀರಭದ್ರಗಾಸೆ ನೋಡುಗರ ಆಕರ್ಷಣೆಯಾಗಿತ್ತು.
ಬಳಿಕ ದೇವಾಲಯದ ಆವರಣ ದಲ್ಲಿ ಸಿದ್ಧಪಡಿಸಿದ್ದ ಕೊಂಡೋತ್ಸವದ ಪೂಜಾ ವಿಧಿಗಳನ್ನು ಸೋಮವಾರ ಪೇಟೆಯ ಕೆ.ಪಿ. ಯೋಗೇಶ್ ಹಾಗೂ ದೇವಾಲಯದ ಅರ್ಚಕ ಅಪ್ಪಣ್ಣ ನೆರವೇರಿಸಿದರು. ಪೂಜಾ ವಿಧಿಗಳು ಮುಗಿದ ಬಳಿಕ ಶ್ರೀ ವೀರಭದ್ರ ಗಾಸೆಯವರು ಬರಿಗಾಲಲ್ಲಿ ಬೆಂಕಿ ಕೊಂಡವನ್ನು ತುಳಿದು ಮುಂದೆ ಸಾಗಿದ ನಂತರ ಶ್ರೀ ಕನ್ನಂಬಾಡಮ್ಮ ಹಾಗೂ ಶ್ರೀ ಬಸವೇಶ್ವರ ದೇವತಾ ಮೂರ್ತಿಗಳ ಉತ್ಸವ ಮೂರ್ತಿ ಹೊತ್ತ ಭಕ್ತರು ಕೆಂಡವನ್ನು ತುಳಿದ ನಂತರ ಹರಕೆ ಹೊತ್ತ ಭಕ್ತಾದಿಗಳು ಬರಿಗಾಲಲ್ಲಿ ತುಳಿದು ಭಕ್ತಿ ಸಮರ್ಪಿಸಿದರು. ಈ ಸಂದರ್ಭ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎನ್.ಕೆ. ಮೋಹನಕುಮಾರ್, ಉಪಾಧ್ಯಕ್ಷ ಕೆ.ಜಿ. ಲೋಕನಾಥ್, ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ಖಜಾಂಚಿ ಬಿ.ಸಿ. ಮುರುಳಿ ಮಾದಯ್ಯ, ಸಹ ಕಾರ್ಯದರ್ಶಿ ಕೆ.ಎಸ್. ರತೀಶ್, ನಿರ್ದೇಶಕರಾದ ಟಿ.ಕೆ. ರಘು, ಸಿ.ಬಿ. ಆಶೀಷ್ ಅಪ್ಪಣ್ಣ, ಕೆ.ಕೆ. ಲೀಲಾವತಿ, ಕೆ.ಸಿ. ಕಾರ್ಯಪ್ಪ, ಬಿ.ಸಿ. ಕಾಳಯ್ಯ ಇದ್ದರು. ನಂತರ ನೆರೆದಿದ್ದ ಭಕ್ತ ಜನಸ್ತೋಮಕ್ಕೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿತು.