ಸಿದ್ದಾಪುರ, ಮೇ ೧೬: ಸಿದ್ದಾಪುರ ಪಟ್ಟಣದಲ್ಲಿ ಕಸವಿಲೇವಾರಿ ಮಾಡದೇ ನಿರ್ಲಕ್ಷಿಸಿರುವ ಗ್ರಾಮ ಪಂಚಾಯಿತಿಯ ವಿರುದ್ಧ ತಾ. ೧೮ರಂದು ನಾಗರಿಕ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಸಂಚಾಲಕ ಹೆಚ್.ಬಿ. ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಸಿದ್ದಾಪುರ ಗ್ರಾ.ಪಂ. ಆಡಳಿತ ಮಂಡಳಿಯು ಕಸ ವಿಲೇವಾರಿಗೆ ಇದುವರೆಗೂ ಜಾಗ ಗುರುತಿಸದೆ ನಿರ್ಲಕ್ಷö್ಯ ವಹಿಸಿದೆ ಎಂದರು. ಪಟ್ಟಣದ ಸುತ್ತಮುತ್ತ ಕಸ ಹಾಗೂ ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ, ಇದರ ದುರ್ನಾತದಿಂದ ಸಾರ್ವಜನಿಕರಿಗೆ ಓಡಾಡಲು ಸಮಸ್ಯೆಯಾಗಿದೆ. ಅಲ್ಲದೆ ರೋಗ ರುಜಿನಗಳು ಹರಡುವ ಭೀತಿ ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ. ಆಡಳಿತ ವೈಖರಿಯನ್ನು ಖಂಡಿಸಿ ತಾ. ೧೮ ರಂದು ಸಿದ್ದಾಪುರ ಗ್ರಾ.ಪಂ. ಎದುರು ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಹೋರಾಟ ನಡೆಸಲಾಗುವುದೆಂದರು. ನಾಗರಿಕ ಸಮಿತಿ ಪ್ರಮುಖ ಎಂ.ಹೆಚ್. ಮೂಸಾ ಒಂದು ವಾರದಲ್ಲಿ ಪಟ್ಟಣದ ವ್ಯಾಪ್ತಿಯ ಕಸವನ್ನು ತೆರವುಗೊಳಿಸದಿದ್ದಲ್ಲಿ ಗ್ರಾ.ಪಂ. ಎದುರು ಆಹೋರಾತ್ರಿ ಹೋರಾಟ ನಡೆಸಲಾಗುವುದೆಂದರು.

ಈ ಸಂದರ್ಭದಲ್ಲಿ ನಾಗರಿಕ ಹೋರಾಟ ಸಮಿತಿ ಪ್ರಮುಖರಾದ ಎನ್.ಕೆ. ಅನಿಲ್, ಎಂ.ಎ. ನವೀದ್ ಖಾನ್, ಚಂದ್ರನ್, ರವಿ, ಪಿ.ಕೆ. ಬಶೀರ್, ಕೆ. ಅಂದು, ವೈಜು, ಪಿ.ಕೆ. ಚಂದ್ರನ್ ಹಾಜರಿದ್ದರು.