ಮಡಿಕೇರಿ, ಮೇ ೧೬ : ಹಳ್ಳಿಗಾಡಿನ ಜನರು ಸರಕಾರಿ ಕಚೇರಿಗಳಿಗೆ ಬಂದರೆ ಅವರ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ, ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲಾಗುವದೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅದಿಕಾರಕ್ಕೆ ಬಂದಿದ್ದು, ಸರಕಾರ ಕಾನೂನು ರೀತ್ಯಾ ಹಾಗೂ ನಿಯಮಾನುಸಾರವಾಗಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ, ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಬೇಕಾಗಿದೆ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಗೊಂದಲಗಳಾಗಿದ್ದು, ಬೇಸರ ಮೂಡಿಸಿದೆ. ಇದೀಗ ಈರ್ವರು ಕಾಂಗ್ರೆಸ್ಸಿನ ಉತ್ತಮ ಶಾಸಕರು ಆಯ್ಕೆಯಾಗಿ ಬಂದಿದ್ದು, ಈರ್ವರು ಕೂಡ ಪಕ್ಷ ಬೇದ ಮರೆತು ಕೆಲಸ ಮಾಡಬೇಕಿದೆ. ಪ್ರಣಾಳಿಕೆಯಲ್ಲಿ ಹೇಳಿರುವ ಉದ್ದೇಶಗಳನ್ನು ಈಡೇರಿಸಬೆಕು. ಅಭಿವೃದ್ಧಿ ಕಾರ್ಯದಲ್ಲಿ ಜನತೆ ಕೂಡ ಶಾಸಕರು ಗಳೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಮಸ್ಯೆಗಳನ್ನು ಈಡೇರಿಸಬೇಕಾದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನದೊಂದಿಗೆ ಉಸ್ತುವಾರಿ ಸ್ಥಾನ ಕೂಡ ಕಲ್ಪಿಸಬೇಕಾಗಿದೆ. ಮುಖ್ಯಮಂತ್ರಿ ಆಯ್ಕೆಬಳಿಕ ಸಚಿವ ಸ್ಥಾನ ಲಭಿಸುವ ಆಶಾಭಾವನೆ ವ್ಯಕ್ತಪಡಿಸಿದರು.
ಡಿಸಿಸಿ ಪ್ರಮುಖ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ; ನೂತನವಾಗಿ ಆಯ್ಕೆಯಾಗಿರುವ ಶಾಸಕರು ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಿದ್ದಾರೆ. ಇನ್ನು ಮುಂದಕ್ಕೆ ಯಾವದೇ ಕಾರಣಕ್ಕೂ ಸರಕಾರಿ ಕೆಲಸ ಕಾರ್ಯದಲ್ಲಿ ಕಮಿಷನ್‌ಗೆ ಅವಕಾಶ ನೀಡುವದಿಲ್ಲ. ಮಧ್ಯವರ್ತಿಗಳು, ಏಜೆಂಟರುಗಳಿಗೆ ಅವಕಾಶ ನೀಡುವದಿಲ್ಲ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಉತ್ತಮ ಆಡಳಿತ ನೀಡಲಾಗುವದು. ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವ ದೆಂದರು. ಸರಕಾರ ರಚನೆಯ ಬಳಿಕ ನಿಗಮ ಮಂಡಳಿಗೆ ಆಯ್ಕೆ ಸಂದರ್ಭ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಶಾಸಕರು, ಪಕ್ಷದ ನಾಯಕರು ಗಮನ ಹರಿಸಬೇಕಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಮುಖ ರಾದ ವಿ.ಪಿ.ಸುರೇಶ್, ಮಡಿಕೇರಿ ನಗರ ಅಧ್ಯಕ್ಷ ರಾಜೇಶ್ ಯಲ್ಲಪ್ಪ. ಬೊಳ್ಳಜಿರ ಅಯ್ಯಪ್ಪ ಇದ್ದರು.