ಮಡಿಕೇರಿ, ಮೇ ೧೬ : ರಾಜ್ಯದಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗುವವರು ಸಿದ್ದರಾಮಯ್ಯರೋ ಅಥವಾ ಡಿ.ಕೆ. ಶಿವಕುಮಾರ್ ಅವರೋ ಎಂಬ ಕುತೂಹಲ ಒಂದೆಡೆಯಾದರೆ ಕೊಡಗಿನ ವೀರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಎ.ಎಸ್. ಪೊನ್ನಣ್ಣ ಸಚಿವ ಸಂಪುಟದಲ್ಲಿ ಸಂಪುಟದರ್ಜೆ ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ ಜಯಗಳಿಸಿರುವ ಕಾಂಗ್ರೆಸ್ ಶಾಸಕರದಲ್ಲಿ ಹಲವು ಹಿರಿಯ ಶಾಸಕರುಗಳಿದ್ದರೂ ಇವರುಗಳ ಪೈಕಿ ಪೊನ್ನಣ್ಣ ಅವರೂ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಹೈಕಮಾಂಡ್‌ನ ಪ್ರಮುಖರಾದ ಸುರ್ಜೆವಾಲ ಹಾಗೂ ವೇಣುಗೋಪಾಲ್ ಅವರುಗಳೂ ಜಿಲ್ಲಾವಾರು ಸಂಭವನೀಯ ಸಚಿವರ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದು ಇದರಲ್ಲಿಯೂ ಪೊನ್ನಣ್ಣ ಹೆಸರಿದೆ. ಪೊನ್ನಣ್ಣ ಅವರು ರಾಜ್ಯಮಟ್ಟದಲ್ಲೂ ಪ್ರಬಲರಾಗಿದ್ದು ಮುಖ್ಯಮಂತ್ರಿ ರೇಸ್‌ನಲ್ಲಿರುವ ಡಿ.ಕೆ.ಶಿ. ಹಾಗೂ ಸಿದ್ದರಾಮಯ್ಯ ಅವರುಗಳಿಬ್ಬರೊಂದಿಗೂ ಉತ್ತಮ ಸಂಬAಧ ಹೊಂದಿದ್ದಾರೆ. ಮಾತ್ರವಲ್ಲ ಸೋನಿಯಾ ಹಾಗೂ ರಾಹುಲ್ ಅವರೊಂದಿಗೂ ಗುರುತಿಸಿಕೊಂಡಿದ್ದಾರೆನ್ನಲಾಗಿದೆ. ಇದಲ್ಲದೆ ಕಳೆದ ಎರಡು ದಶಕಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಎದುರು ಇವರು ಪಕ್ಷಕ್ಕೆ ಜಯ ತರುವಲ್ಲಿ ಯಶಸ್ಸು ಕಂಡಿರುವುದೂ ಗಮನಾರ್ಹವಾಗಿದೆ.

ಪ್ರಭಾವಿ ಶಾಸಕರು, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರನ್ನು ಎದುರಿಸಿ ಜಯಗಳಿಸುವ ಮೂಲಕವೂ ಯುವಕರಾಗಿರುವ ಪೊನ್ನಣ್ಣ ಗುರುತಿಸಲ್ಪಟ್ಟಿದ್ದಾರೆ. ಈ ಹಿಂದೆ ರಾಜ್ಯ ಸರಕಾರದಲ್ಲಿ ಅಡ್ವೋಕೇಟ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿರುವ ಪೊನ್ನಣ್ಣ ಅವರು ಬಹುತೇಕ ಸಚಿವ ಸ್ಥಾನ ಪಡೆಯಲಿರುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.