ಮುಳ್ಳೂರು, ಮೇ ೧೬: ಸಮೀಪದ ಗೋಪಾಲಪುರ ಗ್ರಾಮದ ಪ್ರಸಿದ್ಧ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದ ೨೫ನೇ ವರ್ಷದ ರಜತ ಮಹೋತ್ಸವ ಪ್ರಯುಕ್ತ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿರುವ ವಿಶೇಷ ಪೂಜಾ ಮಹೋತ್ಸವಕ್ಕೆ ಪೂಜಾ ಕಾರ್ಯದೊಂದಿಗೆ ಚಾಲನೆ ನೀಡಲಾಯಿತು.
ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ರಾತ್ರಿಯವರೆಗೆ ನಡೆಯಲಿರುವ ವಿಶೇಷ ಪೂಜಾ ಮಹೋತ್ಸವ ಅಂಗವಾಗಿ ಮಂಗಳವಾರ ಅರ್ಚಕರು ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯ ನೆರವೇರಿಸುವ ಮೂಲಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಸಂಕಲ್ಪ ಪೂಜೆ, ಶ್ರೀ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ ವರ್ಣ, ಕಲಶಾರಾಧನೆ ಕಾರ್ಯದ ಬಳಿಕ ಮೂಲ ಸನ್ನಿಧಾನದಲ್ಲಿ ಪಂಚಾಮೃತ ಸಹಿತ ಮಹಾಭಿಷೇಕ ಪೂಜಾ ಕಾರ್ಯದ ಬಳಿಕ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ತಾ. ೧೭ ರಂದು (ಇಂದು) ವಿವಿಧ ಪೂಜೆ, ಕಲಶ ಮೆರವಣಿಗೆ, ಗ್ರಾಮದ ಬೀದಿಗಳಲ್ಲಿ ಉತ್ಸವ ಮೆರವಣಿಗೆ, ಕೆಂಡೋತ್ಸವ ಇನ್ನು ಮುಂತಾದ ಕಾರ್ಯಗಳು ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ಪ್ರಮುಖರು ತಿಳಿಸಿದರು.