ಮಡಿಕೇರಿ, ಮೇ.೧೬; ಅಭಿವೃದ್ಧಿ ಬಗ್ಗೆ ಚಿಂತನೆ ಇರುವ ಈರ್ವರು ಉತ್ತಮ ಶಾಸಕರು ಕೊಡಗು ಜಿಲ್ಲೆಯಿಂದ ಆಯ್ಕೆಯಾಗಿ ಬಂದಿದ್ದಾರೆ. ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಆಶಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ಉತ್ತಮ ಸಹಕಾರ ನೀಡಿದ್ದಾರೆ. ಅಲ್ಪಸಂಖ್ಯಾತರು ಕೂಡ ಉತ್ತಮ ಸ್ಪಂದನ ನೀಡಿದ್ದಾರೆ. ಅಭಿವೃದ್ಧಿ ಹಾಗೂ ಮಹಿಳೆಯರ ಬಗ್ಗೆ ಚಿಂತನೆ ಇರುವ ಈರ್ವರು ಉತ್ತಮ ಶಾಸಕರು ಆಯ್ಕೆಯಾಗಿ ಬಂದಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ನಲ್ಲಿಯೂ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಇದು ಜಾರಿಯಾಗಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಮುಖ ನೆರವಂಡ ಉಮೇಶ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ವೈಯಕ್ತಿವಾಗಿ ತೇಜೋವಧೆ ಮಾಡಲಾಗಿದೆ, ಆದರೂ ಈರ್ವರು ಗೆದ್ದು ಬಂದಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿ ವಿಶ್ವಾಸ ತೋರಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಮುಖರಾದ ಹಂಸ, ಸುನಿತಾ ಬಿದ್ದಂಡ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಸಹಕಾರ ನೀಡಿರುವದಾಗಿ ಹೇಳಿದರು. ಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಂಚೆಟ್ಟಿರ ಫ್ಯಾನ್ಸಿ, ಜಿಲ್ಲಾ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಇದ್ದರು.