ಶನಿವಾರಸಂತೆ : ವಿಧಾನ ಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಜಯಗಳಿಸಿರುವ ಹಿನ್ನಲೆಯಲ್ಲಿ ಶನಿವಾರಸಂತೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಶನಿವಾರ ವಾರದ ಸಂತೆಯ ದಿನವೂ ಆಗಿದ್ದು ಪೂರ್ಣ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವೃತ್ತದಲ್ಲಿ ಜಮಾಯಿಸಿದರು.ಸಿಹಿ ಹಂಚಿ ಶುಭಾಶಯ ಹೇಳಿದರು.ಪಟಾಕಿ ಸಿಡಿಸಿ ವಿಜೇತರಿಗೆ ಜೈಕಾರ ಹಾಕಿ ಕುಣಿದರು.ಸೋಮವಾರಪೇಟೆ: ವಿಧಾನ ಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಡಾ. ಮಂಥರ್ ಗೌಡ ಹಾಗೂ ವೀರಾಜಪೇಟೆ ಕ್ಷೇತ್ರದಿಂದ ಪೊನ್ನಣ್ಣ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ಪಕ್ಷದ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಡಿಸೋಜ, ನಗರ ಘಟಕದ ಅಧ್ಯಕ್ಷ ಎಚ್.ಎ. ನಾಗರಾಜು, ಪ್ರಮುಖರಾದ ರಮೇಶ್, ಜಮೀರ್, ಕಲ್ಯಾಣ್ ರಾಜು, ಬಿ.ಜಿ. ರವಿ, ಮೋಹನ್ ಮತ್ತಿತರರು ಇದ್ದರು. ಜಿಲ್ಲೆಯಲ್ಲಿ ಎರಡು ನೂತನ ಶಾಸಕರು ಆಯ್ಕೆಯಾದ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ,ಬ್ಯಾಡಗೊಟ್ಟ, ಶನಿವಾರಸಂತೆ ಸೇರಿದಂತೆ ಇತರ ಭಾಗಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.