ಕೂಡಿಗೆ, ಮೇ ೧೩: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಈ ವ್ಯಾಪ್ತಿಯಲ್ಲಿ ಭೂಮಿಯು ಉಳುಮೆಗೆ ಹದವಾಗಿದೆ. ಈ ಭಾಗದ ರೈತರು ಟ್ರಾö್ಯಕ್ಟರ್ ಮತ್ತು ಎತ್ತುಗಳ ಮೂಲಕ ಉಳುಮೆ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸೀಗೆಹೊಸೂರು, ಸಿದ್ಧಲಿಂಗಪುರ, ಅಳುವಾರ, ಬಾಣವಾರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಅನೇಕ ಉಪ ಗ್ರಾಮಗಳಲ್ಲಿ ಹದವಾದ ಮಳೆ ಬಿದ್ದಿರುವುದರಿಂದ ಈ ಗ್ರಾಮಗಳ ರೈತರು ಜಮೀನಿನ ಮಣ್ಣಿಗೆ ಅನುಗುಣವಾಗಿ ಸುಣ್ಣ ಮತ್ತು ಸಾವಯವ ಗೊಬ್ಬರವನ್ನು ಹಾಕಿ ಉಳುಮೆ ಮಾಡಲು ಮುಂದಾಗಿದ್ದಾರೆ.

ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಕಳೆದ ಸಾಲಿನಲ್ಲಿ ಮೆಕ್ಕೆ ಜೋಳದ ಬೆಳೆಗೆ ಉತ್ತಮ ಬೆಲೆ ದೊರಕಿದ್ದರಿಂದಾಗಿ ಮಳೆ ಆಧಾರಿತವಾಗಿ ಜೋಳದ ಬೆಳೆಯನ್ನು ಬೆಳೆಯಲು ರೈತರು ಈ ಬಾರಿ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಗೆ ಮುಂದಾಗಿದ್ದು, ಸಗಣಿ ಗೊಬ್ಬರವನ್ನು ಜಮೀನಿಗೆ ಬಳಸಿ ಉಳುಮೆ ಮಾಡುತ್ತಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.