ಮಡಿಕೇರಿ, ಮೇ ೧೨: ೧೬ನೇಯ ವಿಧಾನ ಸಭೆಗೆ ಕೊಡಗು ಜಿಲ್ಲೆಯನ್ನು ಈ ಬಾರಿ ಪ್ರತಿನಿಧಿಸಲಿರುವವರು ಯಾರು...? ಭಾರೀ ಕುತೂಹಲಕ್ಕೆ ಎಡೆಯಾಗಿರುವ ಈ ಪ್ರಶ್ನೆಗೆ ತಾ. ೧೩ರ ಶನಿವಾರದಂದು (ಇಂದು) ಉತ್ತರ ಸಿಗಲಿದೆ. ಕೊಡಗಿನ ಎರಡು ಕ್ಷೇತ್ರಗಳಾದ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದ ಈ ಬಾರಿಯ ಚುನಾವಣೆ ರಣ ರೋಚಕವಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುವುದು ಸ್ಪಷ್ಟ... ಇಲ್ಲಿ ಜೆಡಿಎಸ್ ಸೇರಿದಂತೆ ಇತರ ಅಭ್ಯರ್ಥಿಗಳ ಸ್ಪರ್ಧೆಯಿದ್ದರೂ ಅದು ಅಷ್ಟೊಂದು ಪ್ರಾಮುಖ್ಯತೆ ಪಡೆದಿಲ್ಲ ಎಂಬದು ದಿಟ. ಆದರೆ ಇವರುಗಳ ಸ್ಪರ್ಧೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳ ಪೈಕಿ ಯಾರಿಗೆ ಲಾಭವಾಗಿದೆ ಯಾರಿಗೆ ನಷ್ಟವಾಗಿದೆ ಎಂಬ ಕುತೂಹಲ ಬಹಳಷ್ಟಿದೆ.
ತಾ. ೧೩ ರಂದು (ಇಂದು) ಮತ ಎಣಿಕೆ ಪ್ರಕ್ರಿಯೆ ಮಡಿಕೇರಿ ಸಂತ ಜೋಸೆಫರ ಶಾಲೆಯಲ್ಲಿ ಬಿಗಿ ಭದ್ರತೆಯ ನಡುವೆ ನಡೆಯಲಿದೆ. ಮಡಿಕೇರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರುಗಳ ಎದುರು ಇಬ್ಬರು ಹೊಸಮುಖಗಳಾದ ಡಾ. ಮಂಥರ್‌ಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರುಗಳು ಪ್ರಬಲ ಎದುರಾಳಿಗಳಾಗಿ ತೀವ್ರ ಪೈಪೋಟಿಯನ್ನು ನೀಡಿರುವುದು ಬಹುತೇಕ ಖಚಿತ.
ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವವರಾರು ಎಂಬ ಕೌತುಕ ತೀರಾ ಅಧಿಕವಾಗಿದೆ. ಬಿಜೆಪಿ ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಗೆಲುವು ಖಚಿತ. ಆದರೆ ಕಳೆದ ಬಾರಿಗಿಂತ ಅಂತರ ಕಡಿಮೆಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಪಾಳಯದವರು ಕನಿಷ್ಟ ಅಂತರದಿAದಾದರೂ ಈ ಬಾರಿ ತಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದು, ಕೊಡಗಿನಲ್ಲಿ ಬದಲಾವಣೆಯಾಗಲಿದೆ ಎಂಬ ಅಚಲ ವಿಶ್ವಾಸ ಹೊಂದಿದ್ದಾರೆ.
ಹಾಲಿ ಶಾಸಕರೇ ಮತ್ತೆ ಮುಂದುವರಿಯಲಿದ್ದಾರೋ ಅಥವಾ ಹೊಸಬರು ಈ ಬಾರಿ ಆಯ್ಕೆಯಾಗಲಿದ್ದಾರೆಯೋ ಎಂಬ ಜನ ಸಾಮಾನ್ಯರ ಕುತೂಹಲಕ್ಕೆ ತಾ. ೧೩ ರಂದು (ಇಂದು) ಮಧ್ಯಾಹ್ನದೊಳಗೆ ಉತ್ತರ ದೊರಕಲಿದೆ.