ಬೆಂಗಳೂರು, ಮೇ ೧೨: ಚುನಾವಣಾ ಆಯೋಗವು ಮತದಾನದ ಸಂಖ್ಯೆಯನ್ನು ಹೆಚ್ಚಿಸಲು ಹಲವು ಕಸರತ್ತು ನಡೆಸಿದರೂ, ರಾಜ್ಯದ ಮತದಾನದ ಶೇಕಡಾವಾರು ೭೫ನ್ನು ಎಂದೂ ದಾಟಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಸಂಖ್ಯೆ ಇಂದಿಗೂ ಶೇಕಡಾ ೫೦ರ ಆಸು ಪಾಸಿನಲ್ಲೇ ಇದೆ. ಈ ನಡುವೆ ರಾಜ್ಯದ ಆರು ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಮತದಾನದಲ್ಲಿ ಮುಂದಿದ್ದು ತಾವು ಪುರುಷರಿಗಿಂತಲೂ ‘ಸ್ಟಾçಂಗ್’ ಎಂದು ಸಾಬೀತುಪಡಿಸಿದ್ದಾರೆ.

ರಾಜಕೀಯ ವಲಯದಲ್ಲಿ ಮಹಿಳೆಯರಿಗೆ ಪ್ರಾತಿನಿದ್ಯ ತೀರ ಕಡಿಮೆಯಿದ್ದರೂ, ಹಕ್ಕು ಚಲಾವಣೆಯಲ್ಲಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ. ತಾ. ೧೦ ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುರುಷರನ್ನೂ ಮೀರಿಸಿ ಮಹಿಳೆಯರು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಮಹಿಳೆಯರಿಂದಲೇ ಹೆಚ್ಚು ಮತ ಚಲಾವಣೆ ಆಗಿದೆ ಎಂದು ಅಂಕಿಅAಶದಿAದ ತಿಳಿದು ಬಂದಿದೆ.

ಈ ಆರು ಜಿಲ್ಲೆಗಳ ಪೈಕಿ ಉಡುಪಿ ಮಹಿಳಾ ಮತದಾನದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಪುರುಷರು ೩,೮೬,೩೬೧ ಮತ್ತು ೪,೩೨,೧೧೬ ಮಹಿಳೆಯರೂ ಮತದಾನ ಮಾಡಿದ್ದು, ಪುರುಷರಿಗಿಂತ ೪೫,೭೫೫ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩೫,೫೮೯ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ. ಕೊಡಗಿನಲ್ಲಿ ಒಟ್ಟು ೧,೬೮,೮೪೩ಪುರುಷರೂ ಮತ್ತು ೧,೭೨,೧೭೬ ಮಹಿಳೆಯರೂ ಮತದಾನ ಮಾಡಿದ್ದು, ೩,೩೩೩ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಪುರುಷರಿಗಿಂತ ೩,೦೩೨ ಹೆಚ್ಚು ಮಹಿಳೆಯರೂ, ಮಂಡ್ಯದಲ್ಲಿ ೨,೮೨೨ ಹೆಚ್ಚು ಮಹಿಳೆಯರೂ ಚಾಮರಾಜನಗರ ಜಿಲ್ಲೆಯಲ್ಲಿ ಪುರುಷರಿಗಿಂತ ೪೮೭ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ. -ಕೋವರ್‌ಕೊಲ್ಲಿ ಇಂದ್ರೇಶ್