ತನ್ನ ಕರುಳ ಬಳ್ಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ತಾಯಿಗಿಂತ ರಕ್ಷಕರು ಯಾರೂ ಇಲ್ಲ. ತನ್ನ ಎದೆ ಹಾಲೆಂಬ ಅಮೃತವನ್ನುಣಿಸಿ ಬೆಳೆಸಿದ ಆ ಮಾತೃ ಹೃದಯ ಸ್ವರ್ಗಕ್ಕಿಂತ ಮಿಗಿಲು. ಜನ್ಮ ಕೊಟ್ಟ ತಾಯಿ ನವ ಮಾಸಗಳು ನಮ್ಮನ್ನು ಗರ್ಭದಲ್ಲಿ ಹೊತ್ತು ಹೆತ್ತು ಬೆಳೆಸಿ ಬದುಕಿನುದ್ದಕ್ಕೂ ಮಾತೃ ಪ್ರೇಮವನ್ನು ಧಾರೆಎರೆದು ಮಕ್ಕಳ ಒಳಿತನ್ನು, ಏಳಿಗೆಯನ್ನು ಬಯಸುತ್ತಾ ತನ್ನ ಕಷ್ಟದಲ್ಲೂ ಮಕ್ಕಳ ಖುಷಿಯನ್ನು ಅನುಭವಿಸುವ ಆ ತಾಯಿ ದೇವರೇ ಸರಿ. ಆದ್ದರಿಂದಲೇ ಆಕೆಯನ್ನು ಮಾತೃದೇವೋಭವ ಎನ್ನುವರು. ತಾಯಿಗಿಂತ ದೇವರಿಲ್ಲ. ದೇವರು ತಾನು ಎಲ್ಲೆಡೆ ಇರಲಾರೆನೆಂದು ಅಮ್ಮನನ್ನು ಸೃಷ್ಟಿಸಿರಬೇಕು.

ಆಕೆ ಜನ್ಮತಳೆದು ಮನೆ ಮಗಳಾಗಿ, ಸಹೋದರಿಯಾಗಿ, ಮನೆ ಬೆಳಗುವ ಸೊಸೆಯಾಗಿ, ಮಡದಿಯಾಗಿ, ತಾಯಿ, ಅಜ್ಜಿ, ಮುತ್ತಜ್ಜಿಯಾಗಿ ತನ್ನ ಸ್ಥಾನವನ್ನು ಪ್ರೀತಿ, ಮಮತೆ, ವಾತ್ಸಲ್ಯದಿಂದ ನಿಭಾಯಿಸುವ ಅವಳನ್ನು ಎಷ್ಟು ಹೊಗಳಿದರೂ ಸಾಲದು. ಗಂಡನ ಸಂಸಾರದೊಡನೆ ಹೊಂದಿಕೊAಡು, ಮಗುವಾದಾಗ ಕರುಣೆಯ ಮೂರ್ತಿಯಾಗಿ, ಮಮತಾಮಯಿ ತಾಯಿಯಾಗಿ ಮಗುವಿನ ಭವಿಷ್ಯದ ರುವಾರಿಯಾಗುವಳು.

ಹೆತ್ತಮ್ಮನ ಇಂತಹ ಪ್ರೀತಿಯನ್ನನುಭವಿಸಿದ ಮಗು ಬದುಕಲ್ಲಿ ಉಜ್ವಲವಾಗಿ ಬೆಳೆಯಲಾರಂಭಿಸುತ್ತದೆ. ಮಗುವಿನ ತೊಟ್ಟಿಲಲ್ಲಿ ಹಾಕಿ ತೂಗುವ ಕೈಗಳು ಮಗುವಿನ ಜೀವನವನ್ನು ರೂಪಿಸುವ ದೈವವಾಗುವಳು. ತಾಯಿ ಪ್ರೀತಿಯಲ್ಲಿ ಬೆಳೆದ ಮಗು ಮುಂದೆ ಸತ್ಪçಜೆಯಾಗಿ ಎತ್ತರಕ್ಕೆ ಬೆಳೆಯುವುದು. ತನ್ನ ಮಕ್ಕಳಿಗಾಗಿ ಮರುಗುವ ಜೀವ ತಾಯಿಯೊಬ್ಬಳೇ. ಮಕ್ಕಳು ಬೆಳೆದು ಉನ್ನತ ಸ್ಥಾನದಲ್ಲಿದ್ದರೂ ತಾಯಿಗೆ ಎಂದೂ ಮಗುವೆ. ಅವಳ ಪ್ರೀತಿಯಲ್ಲಿ ಯಾವ ಕೊರತೆಯೂ ಕಾಣದು. ಸದಾ ತಾಯಿಯನ್ನು ಗೌರವಿಸಿ, ಆಧರಿಸಿ, ಆರೈಕೆ ಮಾಡುವುದು ಮಕ್ಕಳ ಕರ್ತವ್ಯ.

ತನ್ನ ಸುಖ ತ್ಯಾಗಮಾಡಿ ಮಕ್ಕಳ ಸುಖ ಬಯಸುವ ಆಕೆಯನ್ನೆಂದೂ ನಿಂದಿಸಿ ನೋಯಿಸಬಾರದು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಅಮ್ಮನೇ ಮೊದಲ ಗುರು ಎಂದಿರುವರು. ತಾಯಿಗಿಂತ ಬಂಧುವಿಲ್ಲ. ತಾಯಿ ಎಂದೂ ಮಕ್ಕಳಿಗೆ ಕೆಟ್ಟದನ್ನು ಬಯಸಲಾರಳು. ತನ್ನ ಜೀವ ತ್ಯಾಗ ಮಾಡಿಯಾದರೂ ಮಗುವನ್ನುಳಿಸುವಳು. ತಾಯಿ ಹೃದಯ ತಾವರೆಯಂತೆ. ಶಿವಾಜಿಗೆ ಚಿಕ್ಕಂದಿನಲ್ಲಿ ತಾಯಿ ಜೀಜಾಬಾಯಿ ವೀರ ಶೂರರ ಕತೆಗಳನ್ನು ಬಣ್ಣಿಸಿ ಹೇಳಿ ಮಗುವಿಗೆ ಧೈರ್ಯ ತುಂಬಿ ಸಾಮ್ರಾಜ್ಯವನ್ನು ಕಟ್ಟಲು ಪ್ರೇರೇಪಿಸಿದಳು.

ಪುರಾಣದ ಲವಕುಶರಿಗೂ ಮೊದಲ ಗುರು. ತಾಯಿ ಸೀತಾಮಾತೆ ತನ್ನ ಕುಡಿಗಾಗಿ ಪ್ರಾಣವನ್ನಾದರೂ ಪಣವಿಟ್ಟು ಮಗುವಿನ ಆಸೆಗಳನ್ನು ನೆರವೇರಿಸಿ ಮಗುವಿನ ಭವಿಷ್ಯಕ್ಕಾಗಿ ಬೆನ್ನೆಲುಭಾಗಿ ನಿಲ್ಲುವಳು. ಅಮ್ಮಾ-ತಾಯಿಗೆ ಮೊದಲ ಸ್ಥಾನ ಕೊಟ್ಟ ಸಂಸ್ಕೃತಿ ನಮ್ಮದು. ತಾಯಿ ಹೇಗೇ ಇರಲಿ ತನ್ನ ತಾಯಿಯ ಮಡಿಲೇ ಮಗುವಿಗೆ ತಂಪಾದ ಆಶ್ರಯ. ಮಕ್ಕಳು ಅನಾರೋಗ್ಯಕ್ಕೊಳಗಾದರೆ ಊಟ, ನಿದ್ರೆ ಬಿಟ್ಟು ಮಗುವಿಗಾಗಿ ಮರುಗುವಳು. ತನ್ನ ಪ್ರೇಮವನ್ನು ಪ್ರಪಂಚಕ್ಕೇ ಹಂಚಿದೆ. ಎಷ್ಟೋ ಮಹಿಳಾಮಣಿಗಳಿರುವರು. ರಾಮಕೃಷ್ಣ ಪರಮಹಂಸರನ್ನು ಪತ್ನಿ ಶಾರದದೇವಿ ಗುರುವೆಂದು ಭಾವಿಸಿದ್ದರು. ಆತನ ಶಿಷ್ಯರನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ಆಧರಿಸಿದರು. ಕಷ್ಟದಲ್ಲಿರುವವರನ್ನು ವಾತ್ಸಲದಿಂದ ಆಧರಿಸಿ ತನ್ನ ಪ್ರೇಮವನ್ನು ಉಣಬಡಿಸಿದವರು ಮಾತೆ ಮದರ್ ಥೆರೇಸಾ. ಇಂತಹ ಮಕ್ಕಳು ಅದೇ ಪ್ರೇಮವನ್ನು ಸಮಾಜಕ್ಕೆ ನೀಡುವರು. ಹೊಟ್ಟೆಗಿಲ್ಲದವರ ಹಸಿವು ನೀಗಿಸಿದ ಮಹಾ ಮಾತೆಯರಿರುವರು. ತಾಯಿ ಋಣ ಎಷ್ಟು ಜನ್ಮವೆತ್ತಿದರೂ ತೀರಿಸಲಾಗದು.

ದೇವರ ಸೃಷ್ಟಿಯಲ್ಲಿ ಅಪರೂಪವು ಅದ್ಭುತವಾದುದು ಅಮ್ಮಾ. ಇಂತಹ ಅಮ್ಮನನ್ನು ಅಮ್ಮಂದಿರ ದಿನದಂದು ಮಾತ್ರವಲ್ಲ. ಪ್ರತಿದಿನ ಸ್ಮರಿಸಿ ಆಧರಿಸಬೇಕು. ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಕ್ಷಮಿಸುವ ಗುಣ ತಾಯಿಯೊಬ್ಬಳಿಗೆ ಮಾತ್ರ. ತಾಯಿಯ ಹೃದಯ ಮುನಿದರೆ ಮಕ್ಕಳು ಏಳಿಗೆ ಕಾಣಲಾರರು. ತಾಯಿ ಎಂದೂ ಮಕ್ಕಳನ್ನು ಶಪಿಸುವುದಿಲ್ಲ. ಯಕ್ಷ ಪ್ರಶ್ನೆಯಲ್ಲಿ ಭೂಮಿಗಿಂತ ದೊಡ್ಡ ವಸ್ತು ತಾಯಿ ಎಂದಿರುವರು ಧರ್ಮರಾಯ.

ಇಂತಹ ಅಮ್ಮಂದಿರನ್ನು ನಿಕೃಷ್ಟವಾಗಿ ಕಾಣುವ ಎಷ್ಟೋ ಘಟನೆಗಳು, ಮಕ್ಕಳ ಪ್ರೀತಿಯಿಂದ ವಂಚಿತವಾಗಿ ವೃದ್ಧಾಶ್ರಮ ಸೇರುವ ಘಟನೆಗಳು ಕಾಣಬರುತ್ತಿವೆ. ಇಂತಹ ಹೀನ ಕಾರ್ಯ ಯಾರೂ ಮಾಡದಿರಿ.

ಎಲ್ಲೇ ಇರಿ ತಾಯಿ ಬಗ್ಗೆ ಹೃದಯ ಮಿಡಿಯುತ್ತಿರಲಿ. ಏನೇ ಕಳೆದುಕೊಂಡರೂ ಮರಳಿ ಪಡೆಯ ಬಹುದು. ಆದರೆ ತಾಯಿ ಯನ್ನು ಪಡೆಯಲಾಗದು.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.

ಮೊ. ೭೭೬೦೬೮೫೬೭೧