ಶನಿವಾರಸಂತೆ, ಮೇ ೧೨: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮಿಂಚು-ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಒಂದು ಮುಕ್ಕಾಲು ಇಂಚು ಮಳೆಯಾಗಿದೆ. ಸಂಜೆ ೬-೪೫ ಕ್ಕೆ ಮೆಲ್ಲಗೆ ಸುರಿಯಲಾರಂಭಿಸಿದ ಮಳೆ ೭-೩೦ ನಂತರ ತೀವ್ರತೆ ಪಡೆಯಿತು. ವಿದ್ಯುತ್ ಸಂಪರ್ಕವೂ ಕಡಿತಗೊಂಡು ಕಾರ್ಗತ್ತಲಿನಲ್ಲಿ, ಸುರಿಯುವ ಮಳೆಯಲ್ಲಿ ಪೇಟೆಗೆ ಬಂದಿದ್ದ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಳೆ ಇದ್ದಕ್ಕಿದ್ದಂತೆ ಸುರಿಯಲಾರಂಭಿಸಿದಾಗ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಜನತೆ ಆಸರೆಗೆ ಅವರಿವರ ಅಂಗಡಿ-ಮುAಗಟ್ಟು, ಹೊಟೇಲ್, ಕ್ಯಾಂಟೀನ್ ಮುಂಭಾಗ ನಿಂತು ಆಸರೆ ಪಡೆದರು. ರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಗ್ಗಿನ ಜಾವದವರೆಗೂ ಸುರಿಯುತ್ತಲೇ ಇತ್ತು.

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ೨೦೨೨ ನೇ ಸಾಲಿನಲ್ಲಿ ಇದೇ ಅವಧಿಗೆ ಸರಾಸರಿ ೧೬೫.೬೩ ಮಿ.ಮೀ.ಮಳೆಯಾಗಿತ್ತು.ಈ ವರ್ಷ ಮುಂಗಾರು ಮಳೆ ತಡವಾಗಿ ಆರಂಭವಾಗಿದೆ. ಕಳೆದ ಸಾಲಿಗಿಂತಲೂ ಕಡಿಮೆ ಪ್ರಮಾಣದ ಮಳೆಯಾಗಿದ್ದರೂ ವರ್ಷ ಆರಂಭದಿAದ ಈವರೆಗೆ ೫-೬ ಇಂಚು ಮಳೆಯಾಗಿದೆ. ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಬೆಳೆಗಾರರ ಮೊಗದಲ್ಲಿ ಮುಂಗಾರು ಮಂದಹಾಸ ಮೂಡಿಸಿದ್ದು ಕಾಫಿ ತೋಟಗಳಲ್ಲಿ ಹೂಗಳರಳಿ ಎಲ್ಲೆಡೆ ಘಮಘಮಿಸುತ್ತಿದೆ. ಕಾಳುಮೆಣಸು, ಶುಂಠಿ, ಏಲಕ್ಕಿ ಎಲ್ಲಾ ಬೆಳೆಗೂ ಉತ್ತಮ ಮಳೆಯಾಗಿದ್ದು ಉತ್ತಮ ಫಸಲಿನ ಜೊತೆ ಇಳುವರಿ ಪಡೆಯಬಹುದು ಎನ್ನುತ್ತಾರೆ ಕೃಷಿಕರು.

ಗುರುವಾರದಿಂದ ಆರಂಭವಾಗಿರುವ ಕೃತ್ತಿಕ ಮಳೆ ಆರಂಭದ ದಿನವೇ ಉತ್ತಮವಾಗಿ ಸುರಿದು ರೈತರಲ್ಲಿ ಭರವಸೆ ಮೂಡಿಸಿದೆ. ಕೃಷಿ ಚಟುವಟಿಕೆ ಚುರುಕಾಗಿದೆ. ತಡವಾದರೂ ಸಕಾಲಕ್ಕೆ ಹಣ ಕೊಟ್ಟು ಸುರಿಸಿದಂತೆ ಮಳೆ ಯಾಗುತ್ತಿದೆ. ರೈತರ ಚಿಂತೆ ದೂರವಾಗಿದೆ. ವ್ಯವಸಾಯಕ್ಕೆ ಹೇಳಿ ಮಾಡಿಸಿದಂತಹ ವಾತಾವರಣ ಸೃಷ್ಟಿಯಾಗಿದೆ. ಶುಂಠಿ, ಕಾಫಿ ತೋಟಕ್ಕೆ ಗೊಬ್ಬರ ಹಾಕಲು ಒಳ್ಳೆಯ ಸಮಯವಾಗಿದೆ ಎಂದು ಪ್ರಗತಿಪರ ರೈತ ಕಾಜೂರು ಚಂದ್ರಣ್ಣ ಸಂತಸ ವ್ಯಕ್ತಪಡಿಸಿದರು.