ಸಿದ್ದಾಪುರ, ಮೇ ೧೨: ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಅಪಘಾತವಾಗಿ ಸವಾರನು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ.

ವೀರಾಜಪೇಟೆಯಿಂದ ಸಿದ್ದಾಪುರ ಮಾರ್ಗವಾಗಿ ಮಾಲ್ದಾರೆಯತ್ತ ತೆರಳುತ್ತಿದ್ದ ಟಿಪ್ಪರ್ ಹಾಗೂ ಮಾಲ್ದಾರೆಯಿಂದ ಸುಂಟಿಕೊಪ್ಪದತ್ತ ತೆರಳುತ್ತಿದ್ದ ಸ್ಕೂಟಿ ನಡುವೆ ಸಿದ್ದಾಪುರದ ಮೈಸೂರು ರಸ್ತೆಯ ಕ್ರೆöÊಸ್ತ ರುದ್ರಭೂಮಿಯ ಸಮೀಪದಲ್ಲಿ ಅಪಘಾತ ನಡೆದಿದೆ. ಅಪಘಾತದಲ್ಲಿ ಸ್ಕೂಟಿ ಚಾಲನೆ ಮಾಡುತ್ತಿದ್ದ ಸುಂಟಿಕೊಪ್ಪದ ನಿವಾಸಿ ನವೀನ್ ಎಂಬವರ ಮುಖ, ಕೈ ಹಾಗೂ ತಲೆಗೆ ಗಂಭೀರವಾದ ಗಾಯವಾಗಿದೆ. ಹಿಂಬದಿಯ ಸವಾರ ಉದಯ ಎಂಬವರಿಗೂ ಗಾಯವಾಗಿದೆ.

ಗಂಭೀರ ಗಾಯವಾಗಿರುವ ಸವಾರನನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ಮುಖ್ಯಪೇದೆಗಳಾದ ಸಂತೋಷ್ ಹಾಗೂ ತೇಜಾವತಿ ಭೇಟಿ ನೀಡಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.