ಕಣಿವೆ, ಮೇ ೧೨ : ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಾಣ ಮಾಡಿದ್ದ ಕುಶಾಲನಗರ ತಾಲೂಕಿನ ಕೂಡ್ಲೂರು ಏತ ನೀರಾವರಿ ಯೋಜನೆ ನಿಷ್ಪçಯೋಜಕವಾಗಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾವೇರಿ ನದಿಯಿಂದ ನೀರನ್ನು ಮೇಲೆತ್ತಿ ರೈತರ ಜಮೀನುಗಳನ್ನು ಹಸನಾಗಿಸಬೇಕಿದ್ದ ರೂ.೧.೮೦ ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಹಳ್ಳ ಹಿಡಿದಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ರೂ. ೧.೭೦ ಕೋಟಿ ವೆಚ್ಚದ ಏತ ನೀರಾವರಿ ಪುನಶ್ಚೇತನ ಕಾಮಗಾರಿ ರೈತರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ.

೧೯೭೫ ರಲ್ಲಿ ಕುಶಾಲನಗರದವರೇ ಆದ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ದೂರದೃಷ್ಟಿಯಿಂದ ರೂಪುಗೊಂಡಿದ್ದ ಕೂಡ್ಲೂರು ಏತ ನೀರಾವರಿ ಯೋಜನೆ ಆರಂಭದಲ್ಲಿ ಕೂಡ್ಲೂರು, ಗುಮ್ಮನಕೊಲ್ಲಿ ಹಾಗೂ ಕೂಡುಮಂಗಳೂರು ಗ್ರಾಮಗಳ ಸುಮಾರು ೩೦೦ ಎಕರೆಗಳಿಗೂ ಹೆಚ್ಚು ಭೂಮಿಗೆ ನೀರುಣಿಸುತ್ತಿತ್ತು.

ಕ್ರಮೇಣ ಈ ಯೋಜನೆ ೫೦ ವರ್ಷಗಳು ಕಳೆದ ನಂತರ ಸಹಜವಾಗಿಯೇ ಇದರ ಯಂತ್ರಗಳು ಆಗಿಂದಾಗ್ಗೆ ದುರಸ್ತಿಗೆ ಒಳಗಾಗುತ್ತಿದ್ದವು.

ರೈತರು ನಮಗೆ ಹಳೆಯ ಯೋಜನಾ ಘಟಕವೇ ಇರಲಿ. ಹೊಸ ಯೋಜನೆಯ ಹೆಸರಲ್ಲಿ ಮತ್ತೆ ಕನಿಷ್ಟ ಗುಣಮಟ್ಟದ ಯೋಜನೆ ರೂಪಿಸುವುದು ಬೇಡ ಎಂದು ಹೇಳಿದರೂ ಕೂಡ, ಅಧಿಕಾರಿಗಳು ರೈತರ ವಿರೋಧದ ನಡುವೆಯೂ ಕೋಟ್ಯಂತರ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಿ ಕಳೆದ ಮೂರು ವರ್ಷಗಳ ಅವಧಿಯಿಂದ ಈ ಪುನಶ್ಚೇತನ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದರು.

ಇದಕ್ಕಾಗಿಯೇ ನದಿ ದಂಡೆಯಲ್ಲಿದ್ದ ಹಳೆಯ ಯಂತ್ರಾಗಾರದ ಬಳಿ ಮತ್ತೊಂದು ಹೊಸ ಯಂತ್ರಾಗಾರವನ್ನು ನಿರ್ಮಿಸಿದ್ದರು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಮಗಿಷ್ಟ ಬಂದAತೆ ನದಿಯ ನೀರಿನ ತಳಮಟ್ಟ ಅಂದಾಜಿಸದೆ ಮೇಲ್ಮಟ್ಟದಲ್ಲಿ ಕೊಳವೆ ಬಾವಿಯನ್ನು ನಿರ್ಮಿಸಿದ್ದರಿಂದಾಗಿ ಈ ಕೊಳವೆಯೊಳಗೆ ನದಿಯಿಂದ ನೀರು ಹರಿಯದ ಕಾರಣ ಮತ್ತೆ ‘ಹಳೆಯ ಗಂಡನ ಪಾದವೇ ಗತಿ’ ಎಂಬAತೆ ಹಳೆಯ ಕೊಳವೆ ಬಾವಿಯೊಳಕ್ಕೆ ನೀರೆತ್ತುವ ಪೈಪುಗಳನ್ನು ಜೋಡಣೆ ಮಾಡಲು ಯೋಜಿಸುತ್ತಿರುವ ಕುರಿತು ರೈತರು ಅಸಮಾಧಾನ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಯೋಜನೆಯನ್ನು ಪರಿಶೀಲಿಸಬೇಕೆಂದು ಗ್ರಾಮದ ರೈತರಾದ ರಾಜಗೋಪಾಲ್, ಗೋವಿಂದೇಗೌಡ, ಹರೀಶ್, ರಾಜಾಚಾರಿ ಮೊದಲಾದವರು ಒತ್ತಾಯಿಸಿದ್ದಾರೆ.

ಏನು ಈ ಹೊಸ ಯೋಜನೆ

ಕಳೆದ ೨೦೨೦ರಲ್ಲಿ ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಗೊಂಡ ಈ ಏತ ನೀರಾವರಿ ಯೋಜನೆ ೩೫ ಹೆಚ್‌ಪಿ ಸಾಮರ್ಥ್ಯದ ಮೂರು ಸಬ್ ಮರ್ಸಿಬಲ್ ಪೈಪ್‌ಗಳೊಂದಿಗೆ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದ್ದು, ಒಂದು ಯಂತ್ರ ಮೀಸಲಿರಿಸಿ (ಹೆಚ್ಚುವರಿ) ಎರಡು ಯಂತ್ರಗಳಿAದ ೪.೧೨ ಕ್ಯೂಸೆಕ್ಸ್ ನೀರನ್ನು ಮೇಲೆತ್ತುವ ಯೋಜನೆ ಇದಾಗಿತ್ತು.

ಈ ಭಾಗದ ಕೃಷಿ ಜಮೀನಿಗೆ ಭತ್ತ ಹಾಗೂ ಇತರೇ ಬೆಳೆಗಳಿಗೆ ನೀರು ಹರಿಸಬೇಕಿತ್ತು. ಈ ಹಿಂದಿನ ಮೂರು ವರ್ಷಗಳಿಂದ ಯೋಜನೆಯ ಪುನಶ್ಚೇತನ ಕಾಮಗಾರಿಯ ನೆಪದಲ್ಲಿ ರೈತರಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು.

ಆದರೆ ಈ ಬಾರಿ ಯೋಜನೆ ಪೂರ್ಣಗೊಂಡರೂ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮತ್ತೆ ಈ ಬಾರಿಯು ರೈತರಿಗೆ ನೀರು ಹರಿಸಲಾಗುತ್ತಿಲ್ಲ.

ಕೃಷಿಕರ ಆಕ್ರೋಶ

ರೈತರಿಗೆ ಸಕಾಲದಲ್ಲಿ ನೀರು ಹರಿಸದ ಈ ಯೋಜನೆ ಇದ್ದೇನು ಪ್ರಯೋಜನ? ಯಾವ ಪುರುಷಾರ್ಥಕ್ಕೆ ಈ ಯೋಜನೆ ಜಾರಿಮಾಡಲಾಗಿದೆ? ರೈತರಿಗೆ ಪ್ರಯೋಜನವಾಗದ ಈ ಯೋಜನೆಯನ್ನು ರೂಪಿಸಿದ ಅಧಿಕಾರಿಗಳ ಮೇಲೆ ಕ್ರಮವಾಗಲಿ. ನಮಗೆ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ನಮಗೆ ಬೆಳೆ ಪರಿಹಾರ ನೀಡಲಿ. ಸ್ಥಳೀಯವಾಗಿರುವ ಗುತ್ತಿಗೆದಾರರಾಗಿದ್ದರೆ ಸ್ಥಳೀಯವಾಗಿ ರೈತರಿಗೆ ಅನ್ಯಾಯವಾಗಬಾರದು ಎಂಬ ಭಯಕ್ಕಾದರೂ ಈ ಯೋಜನೆಯ ಗುಣಮಟ್ಟ ಕಾಪಾಡುತ್ತಿದ್ದರು. ಆದರೆ ದೂರದ ಮಂಡ್ಯ ಜಿಲ್ಲೆಯ ನಾಗಮಂಗಲದ ಕೆ.ಬಿ. ದಿನೇಶ್ ಎಂಬ ಗುತ್ತಿಗೆದಾರರಿಗೆ ಈ ಯೋಜನೆಯ ಕಾಮಗಾರಿ ನೀಡಿದ್ದು ಆತ ಅವೈಜ್ಞಾನಿಕವಾದ ಕಾಮಗಾರಿ ಮಾಡಿ ಬಿಲ್ ಡ್ರಾ ಮಾಡಿಕೊಂಡು ಹೋಗಾಯ್ತು ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಬಡಾವಣೆಗಳಾಗುತ್ತಿರುವ ಕೃಷಿ ಭೂಮಿ

ಕೂಡ್ಲೂರು ಏತ ನೀರಾವರಿ ಯೋಜನೆ ೧೯೭೫ ರಲ್ಲಿ ಆರಂಭವಾದಾಗ ೩೦೦ ಎಕರೆಗೆ ನೀರು ಹರಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕುಶಾಲನಗರ ನಾಗಾಲೋಟದಲ್ಲಿ ಬೆಳವಣಿಗೆ ಕಂಡ ಬಳಿಕ ಜನವಸತಿ ವಿಸ್ತಾರವಾದ ಬಳಿಕ ಇಲ್ಲಿ ಕೃಷಿ ಮಾಡುತ್ತಿದ್ದ ಭೂಮಿ ಕೂಡ ನಿವೇಶನಗಳಾಗಿ ಮಾರ್ಪಾಡದವು. ಇದರಿಂದಾಗಿ ೩೦೦ ಎಕರೆ ಕೃಷಿ ಭೂಮಿ ಇದ್ದದ್ದು ಈಗ ಕೇವಲ ೩೦ ಎಕರೆಗೆ ಸೀಮಿತಗೊಂಡಿದೆ.

ಇರುವ ಈ ೩೦ ಎಕರೆ ಕೃಷಿ ಭೂಮಿಗೆ ನೀರು ಹರಿಸಲು ಕೂಡ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಆಗುತ್ತಿಲ್ಲ ಎಂದರೆ ನಾವು ಯಾರನ್ನು ನಂಬಬೇಕು. ಯಾರನ್ನು ದೂರಬೇಕು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ಕೃಷಿಕರು.

ಇನ್ನಾದರೂ ಜಿಲ್ಲಾಡಳಿತ ಅಥವಾ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಿಸಿ ಇಲ್ಲಿನ ರೈತರ ಹಿತರಕ್ಷಣೆಗೆ ಮುಂದಾಗಬೇಕಿದೆ.

ರೂ. ೧.೭೦ ಕೋಟಿ ವೆಚ್ಚದ ಯೋಜನೆಯ ನಿಷ್ಪçಯೋಜನಕ್ಕೆ ಕಾರಣವಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಗ್ರಾಮದ ಕೃಷಿಕರ ಒತ್ತಾಯವಾಗಿದೆ. -ವರದಿ : ಕೆ.ಎಸ್. ಮೂರ್ತಿ