ಮಡಿಕೇರಿ, ಮೇ ೧೧: ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ಕೆಲಸದ ವಿಚಾರಕ್ಕೆ ಸಂಬAಧಿಸಿದAತೆ ಮಾತಿಗೆ ಮಾತು ಬೆಳೆದು ನಗರಸಭಾ ಮಹಿಳಾ ಸದಸ್ಯೆ ಮೇಲೆ ಮಾಜಿ ಅಧ್ಯಕ್ಷರೋರ್ವರು ಹಲ್ಲೆ ಮಾಡಿದ್ದಾರೆಂದು ಸದಸ್ಯೆ ನೀಡಿರುವ ದೂರಿನ ಆಧಾರದಲ್ಲಿ ಮೊಕದ್ದಮೆ ದಾಖಲಾಗಿದೆ.

ಮಡಿಕೇರಿ ನಗರಸಭಾ ವ್ಯಾಪ್ತಿಯ ಚಾಮುಂಡೇಶ್ವರಿ ನಗರ ವಾರ್ಡ್ ಸದಸ್ಯೆ ಶ್ವೇತಾ ಪ್ರಶಾಂತ್ ಎಂಬವರ ಮೇಲೆ ಅದೇ ವಾರ್ಡ್ನ ಮಾಜಿ ಸದಸ್ಯ, ನಗರಸಭಾ ಮಾಜಿ ಅಧ್ಯಕ್ಷರೂ ಆಗಿರುವ ಪಿ.ಡಿ.ಪೊನ್ನಪ್ಪ, ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವದಾಗಿ ಶ್ವೇತಾ ನೀಡಿರುವ ದೂರಿನ ಆಧಾರದಲ್ಲಿ ಮಡಿಕೇರಿ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಕಳೆದ ತಾ. ೮ರಂದು ಮಧ್ಯಾಹ್ನ ೧೨.೧೫ರ ವೇಳೆಗೆ ನಗರದ ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಗೆ ತೆರಳಿ ವಾರ್ಡ್ ಕೆಲಸದ ಬಗ್ಗೆ ಮಾತನಾಡುತ್ತಿದ್ದ ಸಂದರ್ಭ ಅಲ್ಲಿಯೇ ಇದ್ದ ಪಿ.ಡಿ. ಪೊನ್ನಪ್ಪ ಅವರು ಕಾಫಿ ಕುಡಿಯುತ್ತಿದ್ದ ಗ್ಲಾಸಿನಿಂದ ತನ್ನ ಕಾಲಿಗೆ ಹೊಡೆದುದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿದರು. ಅಲ್ಲದೆ ಕೈಯಿಂದ ಹಲ್ಲೆ ಮಾಡಿದ್ದಲ್ಲದೆ, ಬೂಟು ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದು ನೋವುಂಟು ಮಾಡಿದ್ದಾರೆ. ಗುಂಡು ಹೊಡೆದು ಕೊಲೆ ಮಾಡುವದಾಗಿ ಬೆದರಿಕೆ ಒಡ್ಡಿದ್ದಾರೆ; ತಾ.೯ ರವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ತಾ.೧೦ರಂದು ಠಾಣೆಗೆ ಆಗಮಿಸಿ ದೂರು ನೀಡುತ್ತಿದ್ದು, ಪೊನ್ನಪ್ಪ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಶ್ವೇತಾ ದೂರಿನಲ್ಲಿ ಕೋರಿದ್ದಾರೆ.

ಈ ದೂರಿನ ಆಧಾರದಲ್ಲಿ ನಗರ ಪೊಲೀಸರು ಐಪಿಸಿ ರೀತ್ಯಾ ಮಹಿಳೆ ಮೇಲೆ ಹಲ್ಲೆ, ನಿಂದನೆ, ದೌರ್ಜನ್ಯ ಪ್ರಕರಣದಡಿ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.