ಮಡಿಕೇರಿ, ಮೇ ೧೦: ಕನ್ನಡ ನಾಡು ನುಡಿ ಸಂಸ್ಕೃತಿಗಳ ರಕ್ಷಣೆ, ಉಳಿವು, ಪರಿಚಯ ಇವುಗಳಿಗಾಗಿ ಸ್ಥಾಪನೆಯಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ೧೦೮ ವರ್ಷಗಳ ಹಿಂದೆ ೧೯೫೫ರಲ್ಲಿ ಮೈಸೂರು ಸಂಸ್ಥಾನದ ದೊರೆಗಳಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಿವಾನರುಗಳಾದ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರು ಸ್ಥಾಪಿಸಿದ ಕರ್ನಾಟಕ ಸಾಹಿತ್ಯ ಪರಿಷತ್ತು ೧೯೩೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರು ನಾಮಕರಣಗೊಂಡಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹ್ಮದ್ ನುಡಿದರು. ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಪರಿಷತ್ತಿನ ೧೦೯ನೇ ಸಂಸ್ಥಾಪನಾ ದಿನದ ಕುರಿತು ಮಾತನಾಡುತ್ತಿದ್ದರು. ಮುಂದುವರೆದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಲೋಕದ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದೆ. ಹೋಬಳಿ ಮಟ್ಟದಲ್ಲಿಯೂ ಪರಿಷತ್ತಿನ ಘಟಕಗಳನ್ನು ರಚಿಸುವ ಮೂಲಕ ಪ್ರತಿ ಗ್ರಾಮದಲ್ಲೂ ಕನ್ನಡದ ಬೆಳವಣಿಗೆ ಅದರ ಸಂಸ್ಕೃತಿಯ ಉಳಿವು ಅರಿವು ಆಗಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತಿನ ಸದಸ್ಯೆ ಚೊಕ್ಕಾಡಿ, ಪ್ರೇಮ ರಾಘವಯ್ಯ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡುತ್ತಾ ಸಾಹಿತ್ಯ ಪರಿಷತ್ತು ತನ್ನ ೧೦೮ ವರ್ಷಗಳ ಸುದೀರ್ಘ ಸೇವೆಯಲ್ಲಿ ಹಲವಾರು ಸಾಹಿತಿ ಕಲಾವಿದರುಗಳ ಕೃತಿ ಬಿಡುಗಡೆ, ೩೦೦೦ಕ್ಕೂ ಹೆಚ್ಚು ದತ್ತಿಗಳ ಮೂಲಕ ಹಲವಾರು ಕಾರ್ಯಕ್ರಮ ಗಳನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೆ.ಯು. ರಂಜಿತ್, ಕೆ.ಜಿ.ರಮ್ಯ, ಹೆಚ್.ಎಸ್. ಪ್ರೇಮ್‌ಕುಮಾರ್ ಉಪಸ್ಥಿತರಿದ್ದರು.